ಬ್ಯಾಡಗಿ: ಬಿಜೆಪಿ ದ್ವೇಷದ ರಾಜಕಾರಣದಲ್ಲಿ ತೊಡಗಿ, ಅಭಿವೃದ್ಧಿಯನ್ನು ಮರೆಮಾಚುವ ಮೂಲಕ ಜನರನ್ನು ದಿಕ್ಕು ತಪ್ಪಿಸುವಲ್ಲಿ ನಿರತವಾಗಿದೆ. ರಾಜ್ಯದ ಜನತೆ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಗುರುವಾರ ತಾಲೂಕು ಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡ ಪ್ರತಿಭಟನೆಯ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ವೀಕ್ಷಿಸಲು ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಕೆಲವರು ಕಪ್ಪು ಬಟ್ಟೆ ತೋರಿಸುವ ಮೂಲಕ ಅವಮಾನ ಮಾಡಿದ್ದಾರೆ. ಕಾರಿಗೆ ಮೊಟ್ಟೆ ಎಸೆದು ವಿಪಕ್ಷ ನಾಯಕನ ಸ್ಥಾನಕ್ಕೆ ಧಕ್ಕೆ ಉಂಟುಮಾಡಿರುವುದು ಸರಿಯಲ್ಲ. ಇಂತಹ ಅಗೌರವ ವರ್ತನೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ, ಬಿಜೆಪಿ ಇಂತಹ ಘಟನೆಗಳಿಗೆ ಬೆಂಬಲಿಸುವುದು ಕೈಬಿಡದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ. ಕೂಡಲೆ ಗೃಹ ಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜೈವಿಕ ಇಂಧನ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಬಿಜೆಪಿ ಆಡಳಿತ ರಾಜ್ಯದಲ್ಲಿ ದಿನೇದಿನೆ ಕುಸಿಯುತ್ತಿದೆ. ಹೀಗಾಗಿ ರಾಷ್ಟ್ರೀಯ ನಾಯಕರ ವಿಷಯ, ಜನರಲ್ಲಿ ಭಾವನೆಗಳನ್ನು ಕೆರಳಿಸುವುದು, ಹೀಗೆ ದಿನಕ್ಕೊಂದು ಹೊಸ ಹೊಸ ವಿಚಾರಗಳನ್ನು ಬಿತ್ತುವಲ್ಲಿ ಬಿಜೆಪಿ ಮುಂದಾಗಿದೆ. ಯಾವುದೇ ಕಾರಣಕ್ಕೂ ಪಕ್ಷದ ನಂಬಿಕೆ ಹಾಗೂ ವಿಶ್ವಾಸವನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.