ಜಿಲ್ಲೆ

ಜನರ ಕಷ್ಟಗಳಿಗೆ ತಾಲೂಕಾಡಳಿತ ಸ್ಪಂದನೆ

ಗಜೇಂದ್ರಗಡ: ಕ್ಷೇತ್ರದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ ರೈತರು ಹಾಗೂ ಕೂಲಿ ಕಾರ್ವಿುಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ತಾಲೂಕಾಡಳಿತ ಸನ್ನದ್ಧವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಸಮೀಪದ ಕುಂಟೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಬಡ ಕೂಲಿ ಕಾರ್ವಿುಕರಿಗೆ ವರದಾನವಾಗಿದೆ. ಈಗಾಗಲೇ ತಾಲೂಕಿನ ಕುಂಟೋಜಿ ಗ್ರಾಪಂ ವಾಪ್ತಿಯಲ್ಲಿ ನರೇಗಾ ಯೋಜನೆಗೆ ಚಾಲನೆ ನೀಡಲಾಗಿದೆ. ಅಲ್ಲದೆ, ಸರ್ಕಾರವು ಲಾಕ್​ಡೌನ್ ಮುಂದುವರಿಸಿರುವುದರಿಂದ ಕೂಲಿ ಕಾರ್ವಿುಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಕೆರೆಯಲ್ಲಿ ನೀರು ಸಂಗ್ರಹವಾದರೆ ಕೃಷಿ ಚಟುವಟಿಕೆ ಜೊತೆಗೆ ಅಂತರ್ಜಲ ವೃದ್ಧಿಸಲಿದೆ. ಹೀಗಾಗಿ ಉಳಿದ ಪಂಚಾಯಿತಿಗಳಲ್ಲೂ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಆರಂಭಿಸಲು ತಾಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷಕುಮಾರ ಪಾಟೀಲ ಮಾತನಾಡಿ, ಲಾಕ್​ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಂಟುಬಗಳಿಗೆ ಉದ್ಯೋಗ ನೀಡಲು ಕುಂಟೋಜಿ ಪಂಚಾಯಿತಿಯ ಬೆಣಚಮಟ್ಟಿ ಕೆರೆಯ ಹೂಳೆತ್ತಲು 325 ಜನರಿಗೆ ಉದ್ಯೋಗ ಖಾತ್ರಿಯಡಿ 7 ದಿನಗಳ ಕಾಲ ಕೆಲಸ ನೀಡಲಾಗಿದೆ. ಅಲ್ಲದೆ, ಶಾಸಕರ ಸೂಚನೆಯಂತೆ ಉಳಿದ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಜಾರಿಗೆ ತರಲಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣವ್ವ ಕುಷ್ಟಗಿ, ತಾಲೂಕು ಪಂಚಾಯಿತಿ ಸದಸ್ಯೆ ರತ್ನವ್ವ ಪೂಜಾರ, ಗ್ರಾಪಂ ಸದಸ್ಯರಾದ ಅಮರೇಶ ನಾಯಕ, ಅಮರೇಶ ಪೂಜಾರ, ರೇಣವ್ವ ಮಾದರ, ಪಿಡಿಒ ಎಸ್.ಬಿ. ಕಡಬಲಕಟ್ಟಿ, ಅಶೋಕ ವನ್ನಾಲ, ಮಹಾಂತೇಶ ಪೂಜಾರ ಇದ್ದರು.