ಚಿತ್ರದುರ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತನ್ನ ಕರ್ತವ್ಯ ಮರೆತು ಆಡಳಿತ ನಡೆಸುತ್ತಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ದೂರಿದರು.
ಭ್ರಷ್ಟಾಚಾರ, ಹೆಣ್ಣು ಭ್ರೂಣ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಆರೋಪಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಿಜೆಪಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ವೇಳೆ ಬರ ಪರಿಹಾರ ವಿತರಿಸಲು ಕೇಂದ್ರದ ಅನುದಾನಕ್ಕಾಗಿ ಕಾಯದೇ ಬಿಡುಗಡೆಗೊಳಿಸಿತ್ತು. ಆದರೆ, ಈಗಿನ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎಸ್ಸಿ-ಎಸ್ಟಿ ಸಮುದಾಯದವರ ಅಭಿವೃದ್ಧಿಗಾಗಿ ಇರುವ ಹಣವನ್ನು ಇನ್ಯಾವುದೋ ಕಾರ್ಯಕ್ಕೆ ಬಳಕೆ ಮಾಡಿಕೊಂಡಿರುವ ಸರ್ಕಾರದ ವಿರುದ್ಧ ಸಂಘಟನೆಗಳು ಎಚ್ಚೆತ್ತು ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೌರ್ಜನ್ಯ, ಕೊಲೆಗಳು ಮುಂದುವರೆದಿದೆ. ಈ ಕುರಿತು ಗೃಹ ಸಚಿವರನ್ನು ಪ್ರಶ್ನಿಸಿದರೆ, ಕಡಿಮೆ ಸಂಖ್ಯೆಯಲ್ಲಿ ಕೊಲೆಗಳಾಗಿವೆ ಎಂಬ ಹೇಳಿಕೆಯೊಂದಿಗೆ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಳಗಾವಿ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಕುರಿತು ಇನ್ನೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಮಾಜದಲ್ಲಿ ವಿವಿಧ ರೀತಿಯ ಶೋಷಣೆಗಳು ನಡೆಯುತ್ತಿದ್ದು, ತಡೆಗೆ ಮುಂದಾಗದಿದ್ದರೆ, ಹೋರಾಟದ ಸ್ವರೂಪ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಬಂಧನ-ಬಿಡುಗಡೆ: ಎಸ್ಸಿ-ಎಸ್ಟಿ ಸಮುದಾಯದವರಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವ ಸಮಾಜ ಕಲ್ಯಾಣ ಸಚಿವರಿಗೆ ಧಿಕ್ಕಾರವೆಂದು ಪ್ರವಾಸಿ ಮಂದಿರ ಮುಂಭಾಗ ಘೋಷಣೆ ಕೂಗಿದ ಬಿಜೆಪಿಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಸುರೇಶ್ ಸಿದ್ದಾಪುರ, ಸಂಪತ್‌ಕುಮಾರ್, ನರೇಂದ್ರ, ನವೀನ್ ಚಾಲುಕ್ಯ, ಮಾಧುರಿ ಗಿರೀಶ್, ಕೆ.ಮಲ್ಲಿಕಾರ್ಜನ್, ವೆಂಕಟೇಶ ಯಾದವ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಭಾರ್ಗವಿ ದ್ರಾವಿಡ್, ಶಾಂತಮ್ಮ, ರಜನಿ, ಕಾಂಚನಾ, ಬಸಮ್ಮ, ನಾಗರಾಜ್, ಕಿರಣ್, ಯಶವಂತ, ಪರಶುರಾಂ, ರಾಮದಾಸ್ ಇತರರಿದ್ದರು.