ಕೆ.ಆರ್.ನಗರ: ಜನರ ಕಣ್ಣೀರು ಒರೆಸಲು ಪೂರ್ಣ ಪ್ರಮಾಣದ ಸರ್ಕಾರ ಬರಲು ಶಾಸಕ ಸಾ.ರಾ.ಮಹೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಎಚ್.ಡಿ.ಕುಮಾರಸ್ವಾಮಿಗೆ ಬಹುಮತ ನೀಡುವಂತೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಶಾಸಕ ಸಾ.ರಾ.ಮಹೇಶ್ ಪರ ಮತಯಾಚನೆ ಮಾಡಿ ಮಾತನಾಡಿ, ಈ ರಾಜ್ಯದಲ್ಲಿ ಜನರ ಪರವಾಗಿ ಆಡಳಿತ ನಡೆಸಿದಂತಹ ನುಡಿದಂತೆ ನಡೆಯುವ ಏಕೈಕ ಮುಖ್ಯಮಂತ್ರಿಯೆಂದರೆ ಅದು ಎಚ್.ಡಿ.ಕುಮಾರಸ್ವಾಮಿ. ಅವರ ಸರ್ಕಾರ ರಚಿಸಲು ಎಲ್ಲರೂ ಕೈಜೋಡಿಸಬೇಕೆಂದು ಕೈಮುಗಿದರು.
ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಮತ್ತು ಮಹಿಳೆಯರು ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ಪಡೆದಿದ್ದರೆ ಅದಕ್ಕೆ ನಾನು ಕಾರಣ, ರಾಜ್ಯದಲ್ಲಿ ನೀರಾವರಿ ಯೋಜನೆಗಾಗಿ ಹೋರಾಟ ಮಾಡಿ ಕೈನಡುಗುತ್ತಿದ್ದರೂ ರಾಜ್ಯಸಭೆಯಲ್ಲಿ ಹೋರಾಟ ಮಾಡಿದ ನನ್ನ ಕೈಯನ್ನು ಹಿಡಿದ ಪ್ರಧಾನಮಂತ್ರಿ, ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಸದರು ಹೊಂದಿರುವುದರಿಂದ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಎಂದು ತಿಳಿಸಿದರು ಎಂದು ತಮ್ಮ ಇಳಿವಯಸ್ಸಿನ ಹೋರಾಟವನ್ನು ನೆನಪಿಸಿದರು.
5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅ ಭಾಗ್ಯ ಈ ಭಾಗ್ಯಗಳನ್ನು ಕೊಡಲು ಹಣ ಬೇಕು, ರೈತರ ಸಾಲಮನ್ನಾಮಾಡಲು ಸಾಧ್ಯವಿಲ್ಲ ಎಂದು ರೈತರ ಮನವಿಯನ್ನು ತಿರಸ್ಕರಿಸಿದರು. ಅದರೆ 14 ತಿಂಗಳು ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಅನ್ನದಾತರ ಅಳಲನ್ನು ನೋಡಲಾರದೇ ರೈತರ ಸಾಲಮನ್ನಾ ಮಾಡಿದರು ಎಂದರು.
ಈ ಬಾರಿ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಂತೆ ವಯೋವೃದ್ಧರಿಗೆ 5 ಸಾವಿರ ರೂ. ಮಾಸಾಶನ ಮತ್ತು ಮಹಿಳೆಯರು ಮಾಡಿರುವ ಸ್ತೀಶಕ್ತಿ ಸಂಘಗಳಲ್ಲಿ ಮಾಡಿರುವ ಸಾಲಮನ್ನಾ ಸೇರಿದಂತೆ ರೈತರಿಗೆ 10 ಸಾವಿರ ರೂ. ಸಹಾಯಧನ, ರೈತರ ಮಕ್ಕಳ ವಿವಾಹಕ್ಕೆ 2 ಲಕ್ಷ ರೂ., ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ಅಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರಲು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಕಣ್ಣೀರಿಟ್ಟ ಮಾಜಿ ಪ್ರಧಾನಿ: ಒಂದು ವರ್ಷದಿಂದ 31 ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆಯ ಮೂಲಕ ಪ್ರವಾಸ ಮಾಡಿ ಸ್ವತಂತ್ರ ಸರ್ಕಾರ ರಚನೆ ಮಾಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಅಡಳಿತ ನಡೆಸಬೇಕೆಂಬ ಹಠದಿಂದ ಎರಡು ಶಸ್ತ್ರಚಕಿತ್ಸೆಯನ್ನು ಲೆಕ್ಕಿಸದೇ ರಾಜ್ಯದ ಜನರ ಹಿತ ಕಾಪಾಡಲು ಪ್ರಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಲಪಡಿಸಲು ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರನ್ನು ಗೆಲ್ಲಿಸುವಂತೆ ನಾನು ಮಿರ್ಲೆಯ ಮಗ ಇದು ನನ್ನ ಗ್ರಾಮ ಎಂದು ಕಣ್ಣೀರು ಸುರಿಸಿ ಮತದಾರರಲ್ಲಿ ಕೈಮುಗಿದು ಮನವಿ ಮಾಡಿದರು.
ಶಾಸಕ ಸಾ.ರಾ.ಮಹೇಶ್, ಜಿಪಂ ಮಾಜಿ ಸದಸ್ಯ ಅಚ್ಚುತಾನಂದ, ತಾಪಂ ಮಾಜಿ ಸದಸ್ಯೆ ಶೋಭಾ ಕೋಟೆಗೌಡ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಮುಖಂಡರಾದ ಮೋಹನ, ಧನಂಜಯ, ತುಕಾರಾಮ್, ರಾಧಾಕೃಷ್ಣ, ಅರವಿಂದ, ಮಧು, ಪ್ರಸನ್ನ, ಎ.ಟಿ.ಗೋಪಾಲ್, ತಿಮ್ಮಪ್ಪ, ರಂಗಸ್ವಾಮಿ, ಲೋಕನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.