ಶಿರಾಳಕೊಪ್ಪ: ಪಕ್ಷ ಮತ್ತು ತಂದೆಯವರ ತೀರ್ಮಾನದಂತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ಆಯೋಜಿಸಿ ಶಿರಾಳಕೊಪ್ಪ, ಸುಣ್ಣದಕೊಪ್ಪ ಹಾಗೂ ತೊಗರ್ಸಿ ಶಕ್ತಿಕೇಂದ್ರಗಳ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿ, 4-5 ತಿಂಗಳ ಹಿಂದೆ ತಾಲೂಕಿನ ನೂರಾರು ಕಾರ್ಯಕತರ್ರು ಬೆಂಗಳೂರಿಗೆ ಆಗಮಿಸಿ ಶಿಕಾರಿಪುರದಿಂದ ನೀವೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ಆಗ ಯಡಿಯೂರಪ್ಪ ಅವರು ನಾನು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಚುನಾವಣೆಗೆ ಯಾರು ನಿಲ್ಲಬೇಕು ಎಂದು ನೀವೇ ತೀರ್ಮಾನಿಸಿ ಎಂದರು. ಆಗ ವಿಜಯೇಂದ್ರ ಅವರನ್ನು ನಿಲ್ಲಿಸುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ನಾನು ಶಿಕಾರಿಪುರದಿಂದ ಸ್ಪರ್ಧಿಸಲು ಸಮ್ಮತಿಸಿದೆ ಎಂದು ಹೇಳಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸಿದವು. ಅವರ ಕುತಂತ್ರದಿಂದ ರಾಜೀನಾಮೆ ಕೊಟ್ಟರು ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಈ ಬಾರಿ ಶಿಕಾರಿಪುರದಿಂದ ಯಡಿಯೂರಪ್ಪ ಅವರ ಬದಲಿಗೆ ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ತೀರ್ಮಾನವಾಗಿದೆ. ವಿಜಯೇಂದ್ರರನ್ನು 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಬೇಕೆಂಬ ತಂದೆಯವರ ಅಪೇಕ್ಷೆಯನ್ನು ನಾವೆಲ್ಲರೂ ಈಡೇರಿಸಬೇಕು ಎಂದರು.