ಹುಬ್ಬಳ್ಳಿ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರ ನೀಡಿದಷ್ಟು ಪ್ರಾಧಾನ್ಯತೆಯನ್ನು ಬೇರಾವ ಸರ್ಕಾರಗಳು ನೀಡಿಲ್ಲ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಎಲ್ಲ ರಂಗದಲ್ಲೂ ಪ್ರಗತಿಯತ್ತ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದರು.
ಬಿಜೆಪಿ ಪೂರ್ವ ವಿಧಾನಸಭಾ ಕ್ಷೇತ್ರದ ವೈದ್ಯಕೀಯ ಪ್ರಕೋಷ್ಠ ಹಾಗೂ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಇಲ್ಲಿನ ಗೂಡ್ಸ್ಶೆಡ್ ರಸ್ತೆಯ ಅಷ್ಟ ವಿನಾಯಕ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಮತ್ತು ಆರೋಗ್ಯವನ್ನು ಜನರ ಬಳಿಗೆ ಕೊಂಡೊಯ್ಯಬೇಕೆಂಬುದು ಪ್ರಧಾನಿ ಮೋದಿ ಅವರ ಆಶಯವಾಗಿದ್ದು, ಅದರಂತೆ ಪಕ್ಷದಿಂದ ಎಲ್ಲೆಡೆ ಉಚಿತ ಶಿಬಿರಗಳ ಮೂಲಕ ಬಡವರ ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದರು.
ನೇತೃತ್ವ ವಹಿಸಿದ್ದ ಬಾಲಾಜಿ ಆಸ್ಪತ್ರೆಯ ನರರೋಗ ತಜ್ಞ ಡಾ. ಕ್ರಾಂತಿಕಿರಣ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಎರಡೂ ಮಹತ್ವದ್ದಾಗಿದ್ದು, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿದ್ದಾಗ ದೈಹಿಕ ಆರೋಗ್ಯ ತನ್ನಿಂತಾನೇ ಉತ್ತಮವಾಗಿರಲಿದೆ ಎಂದರು.
ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ, ಮಹಾನಗರ ಜಿಲ್ಲಾ ಪ್ರಕೋಷ್ಠಗಳ ಪ್ರಮುಖ ಚಂದ್ರಶೇಖರ ಗೋಕಾಕ ಮಾತನಾಡಿದರು. 185ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸನೆ ಮಾಡಿಸಿಕೊಂಡರು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾರ್ಡ್ ಪ್ರಮುಖರಾದ ಅನೂಪ ಬಿಜವಾಡ, ಮಲ್ಲಪ್ಪ ಶಿರಕೋಳ, ಶರವಣ ಸುಬ್ರಮಣಿ, ಬಸವರಾಜ ಶೆಟ್ಟರ್, ರಂಗಸ್ವಾಮಿ ಬಳ್ಳಾರಿ, ಎಂ. ದೀಪಂಗರ, ಮಂಜುನಾಥ ಕಾಟಕರ, ಡಾ. ರವೀಂದ್ರ ವೈ, ಮುಖಂಡರಾದ ಬಸವರಾಜ ಅಮ್ಮಿನಬಾವಿ, ಸತೀಶ ಶೇಜವಾಡಕರ, ರಂಗಾಬದ್ದಿ, ತಾಜುದ್ದೀನ್ ಮುನವಳ್ಳಿ, ಡಾ. ಹರಿಕೃಷ್ಣ, ಡಾ. ಆನಂದ ಕೊಪ್ಪದ, ಡಾ. ರಾಜಶೇಖರ್, ಡಾ. ಅಭಯಾಂಬಿಕಾ, ಡಾ. ರಾಜದೇವ್, ಇತರರು ಉಪಸ್ಥಿತರಿದ್ದರು.