ಶ್ರವಣಬೆಳಗೊಳ: ಜನಾಕ್ರೋಶದಿಂದಲೇ ಬಿಜಪಿಯವರು ನೆಲ ಕಚ್ಚಿದ್ದಾರೆ. ಅವರು ಸಿಟಿಯಲ್ಲಿ ಹೋರಾಟ ಮಾಡಿಕೊಂಡಿದ್ದರು. ಹಳ್ಳಿಗಳಲ್ಲಿ ನಮ್ಮ ಗ್ಯಾರಂಟಿಗಳಿಂದ ಜನರು ನೆಮ್ಮದಿ, ಖುಷಿಯಾಗಿ ಇದ್ದಾರೆ. ಬಿಜೆಪಿಯವರು ಇನ್ನೂ 3 ವರ್ಷ ಆರಾಮಾಗಿರಲಿ ಎಂದು ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ. ಸುಧಾಕರ್ ಸಲಹೆ ನೀಡಿದರು.
ಶ್ರವಣಬೆಳಗೊಳದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ವಿರೋಧ ಪಕ್ಷದಲ್ಲಿರುವವರು ಇದನ್ನೆಲ್ಲಾ ಮಾಡುತ್ತಾರೆ. ನಾವು ತಲೆ ಕೆಡಿಸಿಕೊಳ್ಳಲ್ಲ. ಬೆಲೆ ಏರಿಕೆ ಮಾಡುತ್ತಿರುವವರು ಯಾರು, ಗ್ಯಾಸ್ ಬೆಲೆ ಏರಿಸಿದ್ದು, ಅಬಕಾರಿ ಸುಂಕ ಹೆಚ್ಚಿಸಿದ್ದು ಯಾರು ಎಂದು ಪ್ರಶ್ನಿಸಿದರು.
ನಾವು ಕೇಂದ್ರಕ್ಕೆ ನಾಲ್ಕೂವರೆ ಲಕ್ಷ ರೂ. ತೆರಿಗೆ ಕೊಡುತ್ತೇವೆ. ಅವರು ಸೂಕ್ತ ಅನುದಾನ ಕೊಡುವುದಿಲ್ಲ ಇದು ಮಲತಾಯಿ ಧೋರಣೆ ಅಲ್ಲವೇ. ಬಿಜೆಪಿಯವರು ಕೇಂದ್ರದವರೊಂದಿಗೆ ಮಾತನಾಡಲ್ಲ. ಇಲ್ಲಿ ಜನರ ನಡುವೆ ಸುಳ್ಳು ಪ್ರಚಾರ ಮಾಡುವ ಯತ್ನ ಮಾಡುತ್ತಾರೆ ಎಂದು ವಾಗ್ದಾಳಿ ನಡೆದರು.
ಯಾರು ಏನೇ ಹೇಳಿದರೂ, ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಸಿಎಂ ಬದಲಾವಣೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಡ ವಿಚಾರ. ನಾವು 140 ಶಾಸಕರಿದ್ದೇವೆ. ಒಬ್ಬೊಬ್ಬರು ಒಂದೊಂದು ಮಾತನಾಡಬಹುದು. ಆದರೆ ನಾವೆಲ್ಲ ಒಗ್ಗಟ್ಟಿನಲ್ಲಿದ್ದೇವೆ ಎಂದ ಸಚಿವರು, ಬಿಜೆಪಿಯವರು ಎರಡೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ ಹೋಗಿದ್ದರು. ನೀರಾವರಿ ಇಲಾಖೆಯಲ್ಲೇ 2 ಲಕ್ಷ ಕೋಟಿ ಬಾಕಿ ಉಳಿದಿತ್ತು. ಇದನ್ನೆಲ್ಲಾ ಸರಿದೂಗಿಸಿಕೊಂಡು ಹೋಗುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಬಿಜೆಪಿಯವರು ಬೆಂಗಳೂರಿನಲ್ಲಿ ಕೂತರೆ ಆಗಲ್ಲ, ಹಳ್ಳಿಗಳ ಕಡೆಗೆ ಹೋಗಲಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ನೋಡಲಿ ಎಂದು ತಿರುಗೇಟು ನೀಡಿದರು.