ಮಡಿಕೇರಿ: ಸಮಾಜದ ಅಗತ್ಯತೆಗಳಿಗೆ ತಕ್ಕಂತೆ ಜನರಪರವಾಗಿ ಕಾರ್ಯಪ್ರವತ್ತವಾಗಲು ಕೊಡಗು ಪೊಲೀಸ್ ಇಲಾಖೆ ಬದ್ಧವಾಗಿದೆ. ಕೊಡಗಿನಲ್ಲಿ ಹೆಚ್ಚುತ್ತಿದ್ದ ಗಾಂಜಾ ಮಾದಕ ದ್ರವ್ಯ ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕೈಗೊಂಡಿರುವ ಸಮರಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿತವಾಗಿದ್ದ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿವಿಧ ಸಂಘಸಂಸ್ಥೆಗಳ ಪ್ರಮುಖರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮರಾಜನ್ ಹಲವಾರು ವಿಚಾರಗಳನ್ನು ವಿನಿಮಯ ಮಾಡಿಕೊಂಡರು.
ಕೊಡಗಿನಲ್ಲಿ ಮಾದಕ ದ್ರವ್ಯ ಸೇವನೆ, ಮಾರಾಟ ಪ್ರಕರಣಗಳು ಹೆಚ್ಚಾದರೇ ಅದು ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಕೌಟುಂಬಿಕ ಪ್ರವಾಸೋದ್ಯಮಕ್ಕೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದ ರಾಮರಾಜನ್, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾದಕ ದ್ರವ್ಯ ಮಾರಾಟಗಾರರನ್ನು ಬಗ್ಗು ಬಡಿಯುತ್ತಿದೆ. ಮಾದಕ ದ್ರವ್ಯ ಸೇವನೆ ಮಾಡುವವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಂಥವರ ವಿರುದ್ದವೂ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು. ಡ್ರಗ್ಸ್ ಮುಕ್ತ ಕೊಡಗು ಎಂಬ ಅಭಿಯಾನಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು. ಅಗತ್ಯ ಮಾಹಿತಿಗಳನ್ನು ಪೊಲೀಸರೊಂದಿಗೆ ವಿನಿಮಯ ಮಾಡಿಕೊಳ್ಳಬೇಕೆಂದು ಕೋರಿದರು.
ಕಾನೂನು ಉಲ್ಲಂಘಿಸುವವರಿಗೆ ದಂಡಶುಲ್ಕ ಹಾಕುವ ನಿಟ್ಟಿನಲ್ಲಿಯೂ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು, ವಾಹನ ಸಂಚಾರ ಕ್ರಮಗಳ ಬಗ್ಗೆಯೂ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಜಾಗ್ರತಿ ಅಭಿಯಾನ ಹಮ್ಮಿಕೊಳ್ಳುವ ನಿಟ್ಟಿನಲ್ಲಿಯೂ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಡಿಕೇರಿ ನಗರದಲ್ಲಿ ಪೊಲೀಸ್ ಸಂಚಾರಿ ವಾಹನಗಳ ಮೂಲಕ ಸಂಚಾರ ನಿಯಂತ್ರಣ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಾಹನ ನಿಲುಗಡೆಯ ಬಗ್ಗಯೂ ಧ್ವನಿವರ್ಧಕದ ಮೂಲಕ ಸಂಚಾರಿ ವಾಹನಗಳಲ್ಲಿ ತಿಳಿಸಲಾಗುತ್ತದೆ. ಪೊಲೀಸ್ ಗಸ್ತನ್ನು ನಗರ ಮತ್ತು ಹೊರವಲಯದಲ್ಲಿ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ. ತಾನು ಸ್ವತಃ ಮಫ್ತಿಯಲ್ಲಿ ಖುದ್ದಾಗಿ ನಗರ ಪ್ರದೇಶಗಳಲ್ಲಿ ರಾತ್ರಿ ಬೀಟ್ ತೆರಳಿ ಪುಂಡ ಪೋಕರಿಗಳ ಹಾವಳಿ ನಿಯಂತ್ರಿಸಲು ಮುಂದಾಗುವುದಾಗಿಯೂ ರಾಮರಾಜನ್ ಘೋಷಿಸಿದರು.
ಮಡಿಕೇರಿ ಗಿರಿಪ್ರದೇಶವಾದ್ದರಿಂದಾಗಿ ಸ್ಥಳದ ಕೊರತೆ ಬಹಳವಾಗಿ ಕಾಡುತ್ತಿದೆ. ಹೀಗಾಗಿಯೇ ಮಡಿಕೇರಿಯಲ್ಲಿ ಮುಂದಿನ ದಿನಗಳಲ್ಲಿ ವಾಹನ ನಿಲುಗಡೆಯೇ ಬಹತ್ ಸಮಸ್ಯೆಯಾಗಿ ಕಾಡಲಿದೆ. ಈ ನಿಟ್ಟಿನಲ್ಲಿ ನಗರಸಭೆ, ಜಿಲ್ಲಾಡಳಿತ, ಮೂಡಾ ಸೂಕ್ತ ಸ್ಥಳಗಳನ್ನು ವಾಹನ ನಿಲುಗಡೆಗೆ ಗುರುತಿಸಬೇಕು. ಮಲ್ಟಿ ಲೆವಲ್ ಪಾರ್ಕಿಂಗ್ ವ್ಯವಸ್ಥೆಯೂ ನಗರದ ೨-೩ ಕಡೆಗಳಲ್ಲಿ ಜಾರಿಯಾಗುವ ಅನಿವಾರ್ಯತೆ ಇದೆ ಎಂದು ರಾಮರಾಜನ್ ಹೇಳಿದರು.
ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಅಪಾಯಕಾರಿ ತಿರುವುಗಳಲ್ಲಿ ಎಚ್ಚರಿಕೆಯ ಫಲಕ ಅಳವಡಿಸುವಿಕೆ. ರಾತ್ರಿ ವೇಳೆ ಕಾಣುವಂತೆ ರಸ್ತೆ ಬದಿಗಳಲ್ಲಿ ಬ್ಲಿಂಕರ್ಸ್‌ಗಳನ್ನು ಹಾಕಲಾಗುತ್ತದೆ. ಕೊಡಗು ಜಿಲ್ಲೆಯ ಪ್ರವೇಶ ದ್ವಾರದಲ್ಲಿಯೇ ಡ್ರಗ್ಸ್ ಸೇವನೆ ಬಗ್ಗೆ ಎಚ್ಚರಿಕೆಯ ಸಂದೇಶ ಫಲಕ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಮಡಿಕೇರಿಯ ಕೈಗಾರಿಕಾ ಬಡಾವಣೆಯ ರಸ್ತೆ ಸೇರಿದಂತೆ ನಗರದ ಕೆಲವು ರಸ್ತೆಗಳಲ್ಲಿ ಏಕ ಮುಖ ಸಂಚಾರ ನಿಯಮ ಪಾಲನೆಯಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ರಾಮರಾಜನ್, ಈ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಂಡು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವುದಾಗಿ ಹೇಳಿದರು.
ಗಾಂಜಾ ಮಾರಾಟ ದಂಧೆಯಲ್ಲಿ ಆರೋಪಿಗಳ ಪರವಾಗಿ ಪೊಲೀಸ್ ಸಿಬ್ಬಂದಿಗಳು ಶಾಮೀಲಾಗಿರುವುದು ತಿಳಿದುಬಂದಲ್ಲಿ ಅಂಥ ಸಿಬ್ಬಂದಿಗಳ ಬಗ್ಗೆ ಕಠಿಣ ಕ್ರಮ ಖಂಡಿತಾ ಎಂದು ಭರವಸೆ ನೀಡಿದ ರಾಮರಾಜನ್, ಗಾಂಜಾ ದಂಧೆಯಲ್ಲಿ ಬಹತ್ ಜಾಲವೇ ಶಾಮೀಲಾಗಿದ್ದು ಅಂಥವರನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ ಎಂದರು.
ಮಾದಕ ದ್ರವ್ಯ ಸೇವನೆ ಬಗ್ಗೆ ಯುವಪೀಳಿಗೆಯಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಶಾಲಾಕಾಲೇಜುಗಳಲ್ಲಿ ಸಂಘಸಂಸ್ಥೆಗಳ ಸಹಕಾರದೊಂದಿಗೆ ಜಾಗ್ರತಿ ಕಾಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪಾಲಕರೊಂದಿಗೆ ಚರ್ಚಿಸಿ ಜಾಗ್ರತಿ ಮೂಡಿಸಲಾಗುತ್ತದೆ ಎಂದೂ ಪೊಲೀಸ್ ವರಿಷ್ಟಾಧಿಕಾರಿ ಭರವಸೆ ನೀಡಿದರು.
ಕಾನೂನು ಸಮಸ್ಯೆಗೆ ಸಂಬಂಧಿಸಿದಂತೆ ಯಾವುದೇ ದೂರನ್ನು ಸಾರ್ವಜನಿಕರು ಕೆ.ಎಸ್.ಪಿ. ಆ್ಯಪ್ ಮೂಲಕ ಸಲ್ಲಿಸಬಹುದಾಗಿದ್ದು ಕೂಡಲೇ ಕ್ರಮಖಂಡಿತಾ ಎಂದು ರಾಮರಾಜನ್ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಸದ್ಯದಲ್ಲಿಯೇ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿಗಳು ನೇಮಕಗೊಳ್ಳುವ ನಿರೀಕ್ಷೆ ಇದೆ. ಈ ಸಂದರ್ಭ ಪೊಲೀಸ್ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯಪ್ರವತ್ತವಾಗಲಿದೆ ಎಂದೂ ರಾಮರಾಜನ್ ಹೇಳಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಮಾತನಾಡಿ, ಜಿಲ್ಲೆಯಲ್ಲಿರುವ ಕಾನೂನು ಸಂಬಂಧಿತ ವಿವಿಧ ಸಮಸ್ಯೆಗಳ ಬಗ್ಗೆ ಚಚ್ಸಿಸಲು ಪೊಲೀಸ್ ವರಿಷ್ಟಾಧಿಕಾರಿಯೊಂದಿಗೆ ಈ ಸಂವಾದ ಆಯೋಜಿಸಲಾಗಿದೆ. ಸಮಸ್ಯೆಗಳ ಅನಾವರಣದೊಂದಿಗೆ ಅಂಥ ಸಮಸ್ಯೆಗಳು ಶೀಘ್ರ ನಿವಾರಣೆಯಾಗಲು ಸಂವಾದ ನೆರವಾಗಲಿದೆ. ಪೊಲೀಸ್ ಇಲಾಖೆ ಮತ್ತು ಜನರ ನಡುವಿನ ಸೌಹಾಧ್ಸ ಸಂಬಂಧಕ್ಕೆ ರೋಟರಿ ಮಿಸ್ಟಿ ಹಿಲ್ಸ್ ವೇದಿಕೆ ಕಲ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ, ರೋಟರಿ ವಲಯದ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ನಿರ್ದೇಶಕ ಅನಿಲ್ ಎಚ್.ಟಿ.ನಿರೂಪಿಸಿ, ಅಂಬೆಕಲ್ ವಿನೋದ್ ಕುಶಾಲಪ್ಪ, ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ರೋಟರಿ ಮಾಜಿ ಗವರ್ನರ್ ಡಾ.ರವಿ ಅಪ್ಪಾಜಿ, ಕೊಡಗು ಗೌಡ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ, ಹೋಟೇಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ ಇತರರಿದ್ದರು.
ಬೇರೆ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳೆಂದರೆ ಜನರು ದೇವರ ಹಾಗೆ ಕಾಣುತ್ತಾರೆ. ಕೊಡಗಿನಲ್ಲಿ ಅಧಿಕಾರಿಗಳನ್ನು ಜನಸೇವಕರಂತೆಯೇ ಕಾಣುತ್ತಾರೆ. ಅಧಿಕಾರಿಯಾದವನಿಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡುತ್ತದೆ. ಹೀಗಾಗಿ ಜನರ ಪಾಲಿಗೆ ದೇವರ ಸ್ಥಾನ ಪಡೆಯುವುದಕ್ಕಿಂತ ಸರ್ಕಾರದ ಸೇವೆಯಲ್ಲಿ ಜನಸೇವಕನಾಗಿ ಕಾರ್ಯನಿರ್ವಹಿಸುವುದೇ ನನಗೆ ತೃಪ್ತಿ ನೀಡುತ್ತದೆ.
ಕೆ.ರಾಮರಾಜನ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ