ಬಸವಕಲ್ಯಾಣ: ಹೆಚ್ಚುತ್ತಿರುವ ನಕಲಿ ಪತ್ರಕರ್ತರ ಹಾವಳಿ ಮಧ್ಯೆ ನೈಜ ಪತ್ರಕರ್ತರು ಮತ್ತು ಪತ್ರಿಕೋದ್ಯಮವನ್ನು ಉಳಿಸಿಕೊಂಡು ಹೋಗುವ ಸವಾಲು, ಸಂದರ್ಭ ಎದುರಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಹೇಳಿದರು.
ಪತ್ರಕರ್ತರ ಸಂಘದ ತಾಲೂಕು ಘಟಕ ನಗರದ ತ್ರಿಪುರಾಂತ ಯಾತ್ರಿ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಶಂಕರಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಪತ್ರಕರ್ತ ಎಂದು ಹೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸಲಿಗಿಂತ ವಿಜಿಟಿಂಗ್ ಕಾರ್ಡ್ ಹಿಡಿದು ಬರುವ ನಕಲಿ ಪತ್ರಕರ್ತರ ಸಂಖ್ಯೆ ಜಾಸ್ತಿ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದ ಬದ್ಧತೆ, ಕಳಕಳಿಗಾಗಿ ಈ ವೃತ್ತಿಗೆ ಬಂದಿದ್ದೇವೆ. ಈ ವೃತ್ತಿಗೆ ಬಂದ ಬಳಿಕ ಏನು ಮಾಡುತ್ತಿದ್ದೇವೆ? ನಡೆ-ನುಡಿ ಮುಖ್ಯವಾಗುತ್ತದೆ. ಸತ್ಯದ ಶೋಧನೆ ಪತ್ರಕರ್ತರ ನೈಜ ಜವಾಬ್ದಾರಿ. ಅನ್ಯಾಯವಾದಾಗ ಜನ ಪತ್ರಕರ್ತರ ಬಳಿ ಬರುತ್ತಾರೆ. ಅವರಿಗೆ ಇಲ್ಲೂ ನ್ಯಾಯ ಸಿಗದಾದರೆ ಹೇಗೆ? ಕಷ್ಟದಲ್ಲಿರುವವರ ಧ್ವನಿಯಾಗಿ ಕಣ್ಣೀರು ಒರೆಸುವವರೇ ನಿಜವಾದ ಪತ್ರಕರ್ತರು. ಜನಮುಖಿ ಪತ್ರಿಕೋದ್ಯಮದಲ್ಲಿ ಸಾರ್ಥಕ್ಯ ಅಡಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಶರಣು ಸಲಗರ ಮಾತನಾಡಿ, ಪತ್ರಿಕೋದ್ಯಮದ ಮೆರುಗು ಸೊಬಗು ಹೆಚ್ಚಿಸುವ ಕೆಲಸವಾಗಬೇಕು. ಸಮಾಜದ ಓರೆ-ಕೋರೆ, ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಆಗಬೇಕು. ಯಾವುದೇ ಸೌಲಭ್ಯ ಬೇಕಾದರೂ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ನಮ್ಮ ಕೆಲಸದ ಬಗ್ಗೆ ಅತ್ಮಾವಲೋಕನ ಮಾಡಿಕೊಂಡು ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುವುದೇ ಪತ್ರಿಕಾ ಧರ್ಮ. ಪತ್ರಿಕಾ ದಿನಾಚರಣೆ ಉದ್ದೇಶವೂ ಇದೇ ಆಗಿದೆ. ಆತ್ಮಾವಲೋಕನ ಮಾಡಿಕೊಂಡು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿ, ಕೋವಿಡ್ ವೇಳೆ ಪ್ರಾಣ ಕಳೆದುಕೊಂಡ ೫೨ ಪತ್ರಕರ್ತರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ತಲಾ ೫ ಲಕ್ಷ ರೂ. ಪರಿಹಾರ, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಇತರ ಸೌಲಭ್ಯ ಕೊಡಿಸುವಲ್ಲಿ ಯಶಸ್ವಿಯಾದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ನಗರಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಜಿಲ್ಲಾಧ್ಯಕ್ಷ ಡಿ.ಕೆ. ಗಣಪತಿ, ರಾಜ್ಯ ಪ್ರತಿನಿಧಿ ಬಸವರಾಜ ಕಾಮಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದಿಲೀಪಕುಮಾರ ಉತ್ತಮ, ನಿವೃತ್ತ ಅಭಿಯಂತರ ಚಂದ್ರಶೇಖರ ದುಬೆ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ ಸ್ವಾಗತಿಸಿದರು. ಉಪಾಧ್ಯಕ್ಷ ಡಿ.ಕೆ. ಪ್ರಹ್ಲಾದ ವಂದಿಸಿದರು. ಪತ್ರಕರ್ತ ದೀಪಕ ಠಮಕೆ ನಿರೂಪಣೆ ಮಾಡಿದರು. ಸಂಘದ ಪ್ರತಿಭಾ ಪುರಸ್ಕಾರ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೃತಿ ಕಲ್ಯಾಣರಾವ ಮದರಗಾಂವಕರ್‌ಗೆ ವಿಶೇಷ ಸನ್ಮಾನ ಮಾಡಲಾಯಿತು.
ಹಲವರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶಶಿಕಾಂತ ಶಂಬೆಳ್ಳಿ, ಐಎಸ್‌ಡಬ್ಲ್ಯುಜೆ ಸದಸ್ಯ ದೀಪಕ ಮನ್ನಳ್ಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಕಾರ್ಯದರ್ಶಿಗಳಾದ ಪೃಥ್ವಿರಾಜ್ ಎಸ್., ಸುನೀಲ ಕುಲಕರ್ಣಿ, ತಾಲೂಕು ಪ್ರದಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷರಾದ ಡಿ.ಕೆ. ಪ್ರಹ್ಲಾದ, ಎಂಡಿ ನಯಿಮೋದ್ದಿನ್, ಕಾರ್ಯದರ್ಶಿ ಶಿವಪುತ್ರ ಪಾಟೀಲ್, ಖಜಾಂಚಿ ಪ್ರದೀಪ ವಿಸಾಜಿ, ಗೌರವ ಸಲಹೆಗಾರ ವೀರಶೆಟ್ಟಿ ಮಲಶೆಟ್ಟಿ, ಸದಸ್ಯರಾದ ರಾಜೇಂದ್ರ ಗೋಖಲೆ, ಕಲ್ಯಾಣರಾವ ಮದರಗಾಂವಕರ್, ಧನರಾಜ ರಾಜೋಳೆ, ಎಂಡಿ ಖುತಬೊದ್ದಿನ್, ಪತ್ರಕರ್ತರಾದ ನಾಗಪ್ಪ ನಿಣ್ಣೆ, ಖಾಜಾ ಸರ್ತಾಜೋದ್ದಿನ್, ಸೈಯದ್ ಅಕ್ಬರ್ ಅಲಿ, ಜಾಕೀರ್ ಸೊಂಡಕೆ, ವಸೀಮ್ ಅಕ್ರಮ್, ಮೊಹ್ಮದ್ ಮಿಯಾ ಇತರರನ್ನು ಸನ್ಮಾನಿಸಲಾಯಿತು.
ಹುಣಸಗಿಗೆ ಶಂಕರಪ್ರಸಾದ ದುಬೆ ಪ್ರಶಸ್ತಿ ಪ್ರದಾನ: ಪತ್ರಿಕಾ ರಂಗದಲ್ಲಿ ಅಪರೂಪದ ಸೇವೆ ಸಲ್ಲಿಸಿ ಬೀದರ್ ಜಿಲ್ಲೆ ಪ್ರಗತಿಗೆ ಅನನ್ಯ ಕೊಡುಗೆ ನೀಡಿದ ಶಂಕರಪ್ರಸಾದ ದುಬೆ ಸ್ಮರಣಾರ್ಥ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಬಸವಕಲ್ಯಾಣದಿಂದ ಶಂಕರಪ್ರಸಾದ ದುಬೆ ವಿಭಾಗ ಮಟ್ಟದ ಪ್ರಶಸ್ತಿಯನ್ನು ಕಲಬುರಗಿಯ ಹಿರಿಯ ಪತ್ರಕರ್ತ ಚಂದ್ರಕಾಂತ ಹುಣಸಗಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಕಲ್ಯಾಣದಲ್ಲಿ ಪತ್ರಿಕಾ ಭವನ ಶೀಘ್ರ: ಬಸವಕಲ್ಯಾಣದಲ್ಲಿ ಆದಷ್ಟು ಬೇಗ ಪತ್ರಿಕಾ ಭವನ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇನೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಅರಂಭಿಸಿದರೆ ವೈಯಕ್ತಿಕವಾಗಿ ೨ ಲಕ್ಷ ರೂ. ನೀಡುವುದಾಗಿ ಶಾಸಕ ಸರಣು ಸಲಗರ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ತಗಡೂರ ಪ್ರಸ್ತಾಪಿಸಿದ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಲಗರ, ಕ್ಷೇಮಾಭಿವೃದ್ಧಿ ನಿಧಿ ಆರಂಭಿಸುವುದಾದರೆ ನಾಳೆಯೇ ಹಣ ನೀಡುವುದಾಗಿ ತಿಳಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜವಾಬ್ದಾರಿ ಹೆಚ್ಚಿರುತ್ತದೆ. ವೃತ್ತಿಗೆ ಬದ್ಧರಾಗಿ ಪ್ರಾಮಾಣಿಕ ಕೆಲಸ ಮಾಡುವ ಪತ್ರಕರ್ತರ ಸಂಖ್ಯೆ ಹೆಚ್ಚಾಗಬೇಕಿದೆ. ಸಮಾಜ ನಮ್ಮನ್ನು ಗಮನಿಸುತ್ತಿರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ. ಕಾರ್ಯನಿರತರಿಗೆ ಮಾತ್ರ ನಮ್ಮ ಸಂಘಟನೆ ಇದೆ ಹೊರತು, ಮರೆತವರಿಗಲ್ಲ.
| ಶಿವಾನಂದ ತಗಡೂರ
ಅಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ