ಜಿಲ್ಲೆ

ಜನಮಾನಸಕ್ಕೆ ಬಸವ ತತ್ವ ತಲುಪಿಸಿದ ಮಾತೆ

ಬಸವಕಲ್ಯಾಣ: ಸಮಾನತೆ, ಕಾಯಕ, ದಾಸೋಹದ ಸಂದೇಶ ಹೊತ್ತ ಗುರುಬಸವಣ್ಣನವರ ನೇತೃತ್ವದಲ್ಲಿ ಹಲವು ಶರಣರು ವಚನಗಳನ್ನು ರಚಿಸಿದ್ದು, ಅದನ್ನು ತಳಮಟ್ಟದ ಜನರಿಗೆ ತಲುಪಿಸುವ ಮಹತ್ಕಾರ್ಯವನ್ನು ಜಗದ್ಗುರು ಮಾತೆ ಮಹಾದೇವಿ ಅವರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಬಸವ ಮಹಾಮನೆಯಲ್ಲಿ ನಡೆಯುತ್ತಿರುವ ೨೨ನೇ ಕಲ್ಯಾಣ ಪರ್ವದಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ಧರ್ಮ ಚಿಂತನ ಗೋಷ್ಠಿ ೨ ಉದ್ಘಾಟಿಸಿ ಮಾತನಾಡಿ, ಅಂದು ಶರಣರು ವಚನ ಸಾಹಿತ್ಯದ ಮೂಲಕ ಮಾನವೀಯ ಮೌಲ್ಯ ಬಿತ್ತಿದ್ದಾರೆ. ಅಂತಹ ಮೌಲ್ಯಗಳಲ್ಲಿ ಅಡಗಿರುವ ಸಂದೇಶ ಜನರಿಗೆ ಮುಟ್ಟಿಸಿದ್ದಾರೆ ಎಂದರು.

ಹಲವು ನೋವು, ಕಷ್ಟ, ಮಾನ, ಅವಮಾನ ಎದುರಿಸಿಯೂ ಬಸವ ತತ್ವ ಪ್ರಚಾರ ಮಾಡಿದ್ದಾರೆ. ಶರಣರು ಅನುಭವ ಮಂಟಪ ಮೂಲಕ ಸಮಾಜದಲ್ಲಿನ ಅನಿಷ್ಠ ಪದ್ದತಿ ಹೋಗಲಾಡಿಸಿದ್ದಾರೆ. ಶರಣರ ಕ್ರಾಂತಿ ಅರಿತು ಆಚರಣೆಗೆ ತರಬೇಕಿದೆ. ಜಗತ್ತು ಇರುವವರೆಗೆ ವಚನ ಸಾಹಿತ್ಯ ಶಾಶ್ವತವಾಗಿ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಬಾರಿ ಬಸವ ತತ್ವವನ್ನು ಸ್ಮರಿಸಿ, ಅದರಂತೆ ನಡೆಯುತ್ತಿದ್ದಾರೆ. ನೂತನ ಸಂಸತ್ ಭವನದಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಿದ್ದಾರೆ ಎಂದರು.

ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ಮಾತನಾಡಿ, ಬೆಂಗಳೂರಿನಲ್ಲಿ ಮೆಟ್ರೋಗಳಿಗೆ ಬಸವೇಶ್ವರ ಮೇಟ್ರೋ ಎಂದು ಸರ್ಕಾರ ನಾಮಕರಣ ಮಾಡಬೇಕು, ಬಸವಕಲ್ಯಾಣ, ಕೂಡಲ ಸಂಗಮ ಹಾಗೂ ಉಳವಿಯಂತಹ ಶರಣರ ಪವಿತ್ರ ಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಬೇಕು. ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು. ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು. ಬಸವಕಲ್ಯಾಣ ಹಾಗೂ ಕೂಡಲ ಸಂಗಮಕ್ಕೆ ರೈಲು ಬರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಗುರು ಬಸವಪೂಜೆ ನೆರವೇರಿಸಿದರು. ಬಾಬುವಾಲಿ ಧ್ವಜಾರೋಹಣ ಮಾಡಿದರು. ಬಸವ ಮಹಾಮನೆಯಲ್ಲಿ ನಿರ್ಮಿಸಿದ ದಾಸೋಹ ಮಂಟಪವನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.

ಕೂಡಲ ಸಂಗಮದ ಶ್ರೀ ಸದ್ಗುರು ಮಾದೇಶ್ವರ ಸ್ವಾಮೀಜಿ, ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ, ಬೇಲೂರ ವಿರಕ್ತ ಮಠದ ಶಿವಕುಮಾರ ಸ್ವಾಮೀಜಿ, ಬಸವನ ಬಾಗೇವಾಡಿಯ ಶ್ರೀ ವಿರತೀಶಾನಂದ ಸ್ವಾಮೀಜಿ, ಬೇಲೂರು ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗೋರ್ಟಾ ಲಿಂಗಾಯತ ಮಹಾ ಮಠದ ಶ್ರೀ ಪ್ರಭುದೇವರು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ರಾಜೇಂದ್ರಕುಮಾರ ಗಂದಗೆ, ರವೀಂದ್ರ ಕೊಳಕೂರ, ಆರ್.ಜಿ.ಶೆಟಗಾರ, ಕುಶಾಲರಾವ ಪಾಟೀಲ್ ಖಾಜಾಪುರ, ಸಂಜೀವಕುಮಾರ ಪಾಟೀಲ್, ಜೆ.ಎಸ್.ಪಾಟೀಲ್, ಅನೀಲ ಪಾಟೀಲ್, ಸಂಗಮೇಶ ಎನ್ ಜವಾದಿ ಇತರರಿದ್ದರು.

ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಸುರೇಶಕುಮಾರ ಸ್ವಾಮಿ ನಿರೂಪಣೆ ಮಾಡಿದರು. ರವಿ ಪಾಪಡೆ ವಂದಿಸಿದರು.