ಜಿಲ್ಲೆ

ಜನಮನ ಸೂರೆಗೊಂಡ ದೇಸಿ ಕಲಾ ವೈಭವ

ಕಾನಹೊಸಹಳ್ಳಿ: ಗುಡೇಕೋಟೆಯಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಉತ್ಸವ ದೇಸಿ ಕಲಾವೈಭವಕ್ಕೆ ಸಾಕ್ಷಿಯಾಯಿತು. ಉತ್ಸವದ ಕೊನೆಯ ದಿನವಾದ ಮಂಗಳವಾರ ವಿವಿಧ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಕುರಿಹಟ್ಟಿಯ ರಾಜಣ್ಣ, ಕೂಡ್ಲಿಗಿಯ ಎ.ತಿಂದಪ್ಪ, ಅನುರಾಧಾ ವಾಲ್ಮೀಕಿ, ತಿಮ್ಮನಹಳ್ಳಿಯ ಡಿ.ಬಿ.ನಿಂಗಪ್ಪ, ಭೀಮಸಮುದ್ರದ ಪೂಜಾ, ಹಗರಿಬೊಮ್ಮನಹಳ್ಳಿ ತಾಲೂಕು ನೆಲ್ಕುದುರೆಯ ಮಹಾಂತೇಶ್, ಚಿಕ್ಕಜೋಗಿಹಳ್ಳಿಯ ಹನುಮಂತಪ್ಪ ತಂಡದ ಸುಗಮ ಸಂಗೀತ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಕೂಡ್ಲಿಗಿಯ ಗೌರಮ್ಮ ತಂಡದ ಸೋಬಾನೆ ಪದ, ನರಸಿಂಹಪ್ಪ, ಸಿರಗುಪ್ಪದ ವೀರೇಶ್ ದಳವಾಯಿ ತಂಡದ ವಚನ ಸಂಗೀತ, ರಾಮಸಾಗರಹಟ್ಟಿಯ ಗುರುಶಂಕರಪ್ಪ ತಂಡದ ತತ್ವಪದ, ಕೂಡ್ಲಿಗಿ ಮಂಜುನಾಥ ತಂಡದ ಭಕ್ತಿ ಸಂಗೀತ ಕಾರ್ಯಕ್ರಮ ನೆರದಿದ್ದವರನ್ನು ಭಕ್ತಿಯ ಕಡಲಲ್ಲಿ ತೇಲಿಸಿತು.

ಕೂಡ್ಲಿಗಿಯ ರೇಖಾ ಚಳಗೇರಿ, ಸೌಮ್ಯಶ್ರೀ, ಕೊಟ್ಟೂರಿನ ಪೂರ್ಣಿಮಾ ಪವಾರ್, ಕೂಡ್ಲಿಗಿಯ ಸ್ಫೂರ್ತಿ ತಂಡ, ಬಳ್ಳಾರಿಯ ಭಾರತಿ ನಾಟ್ಯ ಕಲಾ ಟ್ರಸ್ಟ್ ಕಲಾವಿದರ ಭರತನಾಟ್ಯದ ಝಲಕ್ ನೋಡುಗರ ಗಮನ ಸೆಳೆದವು. ಹಗರಿಬೊಮ್ಮನಹಳ್ಳಿ ಶ್ರೀನಿವಾಸ ತಂಡದ ಕವಿ ಕುಂಚ ಗಾಯನ ಕಾರ್ಯಕ್ರಮ ನೋಡುಗರನ್ನು ಮೂಕವಿಸ್ಮಿತವಾಗಿಸಿತು.

ಹಗರಿಬೊಮ್ಮನಹಳ್ಳಿಯ ಶಾರದಾ ತಂಡದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಎಲ್ಲೆಲ್ಲೂ ಪ್ರತಿಧ್ವನಿಸಿತು. ಬಿಷ್ಣಹಳ್ಳಿಯ ಸಿದ್ದಪ್ಪ ಗೋರಖನಾಥ ತಂಡದ ಬಯಲಾಟದ ಪ್ರಸಂಗ, ಟಿ.ಕಲ್ಲಹಳ್ಳಿ ಹರೀಶ್ ಜಿಂಕೆ ತಂಡದ ಕಿರುನಾಟಕ, ಗುಡೇಕೋಟೆಯ ಜಿ.ವಿ.ಎಸ್ ಶಾಲೆ ವಿದ್ಯಾರ್ಥಿಗಳ ‘ಸಾಯ್ತರ’ ನಾಟಕ, ಕೊಟ್ಟೂರಿನ ಚಿಗಟೇರಿ ಕೊಟ್ರೇಶ ತಂಡದ ನಾಟಕದ ಸನ್ನಿವೇಶಗಳು ಪ್ರೇಕ್ಷಕರನ್ನು ರಂಜಿಸಿದವು. ಜರ್ನಿ ಥಿಯೇಟರ್ ಗ್ರೂಪಿನ ಗೀತಗಾಯನ, ಹರಪನಹಳ್ಳಿ ಪ್ರಜ್ವಲ್ ತಂಡದ ವಾಯಲಿನ್ ವಾದನ ಕಿವಿಗೆ ತಂಪೆರೆಯಿತು.

ಕಲಾವಿದರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಅವರು ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಿದರು.