ರೋಣ: ನರಗುಂದ ಪಟ್ಟಣದಲ್ಲಿ ಕಳಸಾ-ಬಂಡೂರಿ ಹೋರಾಟಕ್ಕೆ ಜನಮನ್ನಣೆ ಸಿಕ್ಕಿದ್ದು ಮಾಜಿ ಸಚಿವ ಬಿ.ಆರ್. ಯಾವಗಲ್ ಹಾಗೂ ನನ್ನಿಂದ. ಅಲ್ಲಿ ನಡೆಸುತ್ತಿರುವ ಹೋರಾಟಗಾರರಿಂದಲ್ಲ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ಯಾವಗಲ್ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮತ್ತು ಬಿ.ಆರ್. ಯಾವಗಲ್ ಹಾವು-ಮುಂಗುಸಿಯಂತಿದ್ದವರು, ರೈತರ ಒಳಿತಿಗಾಗಿ ನರಗುಂದದಲ್ಲಿ ನಡೆಯುತ್ತಿದ್ದ ಮಹದಾಯಿ ಹೋರಾಟದ ವೇದಿಕೆಯಲ್ಲಿ ಏಕಕಾಲಕ್ಕೆ ಕಾಣಿಸಿಕೊಂಡೆವು. ಇದರಿಂದ ಈ ಹೋರಾಟಕ್ಕೆ ಅಪಾರ ಪ್ರಮಾಣದ ಜನ ಬೆಂಬಲ ದೊರೆಯಿತು. ಆದರೆ ಅಲ್ಲಿ ಹೋರಾಟ ನಡೆಸುತ್ತಿರುವ ಕೆಲವರು, ಅವರಿಂದಲೇ ಹೋರಾಟಕ್ಕೆ ಜನ ಬೆಂಬಲ ದೊರೆಯಿತು ಎನ್ನುವುದು ಅವರ ತಪ್ಪು ಕಲ್ಪನೆ ಎಂದು ಹೇಳಿದರು.
ಹೋರಾಟಕ್ಕೆ ರಾಜಕೀಯ ಬಣ್ಣ: ಮಹದಾಯಿ ವಿಷಯದಲ್ಲಿ ಹೋರಾಟ ನಡೆಸುತ್ತಿರುವ ಕೆಲವರು ರಾಜ್ಯ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಇದರ ಅವಶ್ಯಕತೆ ಇತ್ತಾ ಎಂದು ಸಚಿವರು ಪ್ರಶ್ನಿಸಿದರು. ಯಾವ ಬಿಜೆಪಿ ಕಾರ್ಯಾಲಯದ ಮುಂದೆ ಇವರು ಹೋರಾಟ ನಡೆಸಿದ್ದರೋ, ಅದೇ ಪಕ್ಷದ ನಾಯಕರ ನೇತೃತ್ವದಲ್ಲಿ ಇಂದು ಮಹದಾಯಿ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದರು. ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಅನೇಕರಿದ್ದರು.