ಹೊಸನಗರ: ಮಡಿಕೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವುದು ಅತ್ಯಂತ ಹೀನಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶನಿವಾರ ಬಸ್‌ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿದ್ದರಾಮಯ್ಯ ಅವರಿಗೆ ಇರುವ ಜನಬೆಂಬಲ ಅರಗಿಸಿಕೊಳ್ಳಲಾಗದೆ ಬಿಜೆಪಿ ಕಾರ್ಯಕರ್ತರು ಹೀನಕೃತ್ಯ ಎಸಗಿದ್ದಾರೆ. ನೈತಿಕತೆ, ಸಂಸ್ಕೃತಿ ಬಗ್ಗೆ ಪಾಠ ಮಾಡುವ ಬಿಜೆಪಿ ಪಕ್ಷದವರು ಸರ್ಕಾರದ ಒಂದು ಭಾಗವಾದ ವಿಪಕ್ಷ ನಾಯಕ ಸ್ಥಾನದ ಗೌರವಕ್ಕೆ ಅಗೌರವ ತಂದಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಕೇವಲ ಕೋಮು ಭಾವನೆ ಕೆರಳಿಸುವಲ್ಲಿ ನಿರತವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಖಾತೆ ನಿಭಾಯಿಸುವಲ್ಲಿ ಅಸಮರ್ಥರಾಗಿದ್ದಾರೆ. ಪ್ರತಿಪಕ್ಷ ನಾಯಕನ ಸ್ಥಿತಿಯೇ ಹೀಗಾದರೆ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ. ಕೂಡಲೆ ಆರಗ ಜ್ಞಾನೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.