ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಜಾರಿಗೊಂಡಿರುವ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯ ರಾಜ್ಯದಲ್ಲೂ ಜನಪ್ರಿಯತೆ ಪಡೆದುಕೊಂಡಿದೆ.
ಭಾರತೀಯ ರೈಲ್ವೆ ಸಚಿವಾಲಯದ ಈ ಯೋಜನೆಯನ್ನು ‘ವೋಕಲ್ ಫಾರ್ ಲೋಕಲ್’ ದೃಷ್ಟಿಕೋನದಿಂದ ಪ್ರಾರಂಭಿಸಿದೆ. ಸ್ಥಳೀಯರೇ ತಯಾರಿಸಿದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸುವುದು, ಆರ್ಥಿಕವಾಗಿ ಹಿಂದುಳಿದವರ ಸ್ವಾವಲಂಬನೆಗೆ ಅವಕಾಶ ನೀಡುವ ಮೂಲಕ ಅವರನ್ನು ಉತ್ತೇಜಿಸುವುದು ಇದರ ಉದ್ದೇಶ. ಸ್ಥಳೀಯರಿಂದ ತಯಾರಿಸಿದ ಸ್ಥಳೀಯ ಉತ್ಪನ್ನಗಳ ಪ್ರದರ್ಶನ, ಮಾರಾಟ, ಹೆಚ್ಚಿನ ಪ್ರಚಾರ ನೀಡುವ ಸಲುವಾಗಿ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆ ಸ್ಥಾಪಿಸಲು ಅವಕಾಶ ನೀಡಲಾಗಿದೆ.
2022ರ ಮಾರ್ಚ್ 25ರಂದು ಇದು ಜಾರಿಗೆ ಬಂದಿದೆ. ಈವರೆಗೆ 728 ನಿಲ್ದಾಣ, 21 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 785 ನಿಲ್ದಾಣಗಳಲ್ಲಿ ಸ್ಥಾಪಿಸುವ ಮೂಲಕ ಈ ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳ, ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಷ್ಟ್ರದೆಲ್ಲೆಡೆ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್ ಏಕರೂಪದ ಆಕರ್ಷಕವಾದ ವಿನ್ಯಾಸವನ್ನು ಮಾಡಿದೆ.
ರಾಜ್ಯದಲ್ಲಿ 21 ಮಳಿಗೆಗಳು ವಿವಿಧ ರೈಲು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬುಡಕಟ್ಟು ಜನಾಂಗದವರು ಸ್ಥಳೀಯವಾಗಿ ತಯಾರಿಸಿದ ಕಲಾಕೃತಿಗಳು, ಕೈಮಗ್ಗದ ಮತ್ತು ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಪುಗಳು, ಸಂಸ್ಕರಿಸಿದ ಆಹಾರಗಳು ಸೇರಿದಂತೆ ಇನ್ನಿತರ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣದ ಆಟಿಕೆಗಳು, ತುಮಕೂರಿನ ಮಳಿಗೆಯಲ್ಲಿ ತೆಂಗಿನ ಉತ್ಪನ್ನಗಳು, ಅರಸೀಕೆರೆ ನಿಲ್ದಾಣದಲ್ಲಿ ಸಾಂಪ್ರದಾಯಿಕ ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಇನ್ನಿತರ ಉತ್ಪನ್ನ ಪ್ರದರ್ಶಿಸಲಾಗುತ್ತದೆ.
ಹುಬ್ಬಳ್ಳಿಯ ರೈಲು ನಿಲ್ದಾಣದ ಮಳಿಗೆಗೆ ಹೆಚ್ಚು ಪ್ರಯಾಣಿಕರು ಭೇಟಿ ನೀಡಿ ವಸ್ತು ಖರೀದಿಸುತ್ತಿದ್ದಾರೆ. ಹೆಚ್ಚಿನ ಗ್ರಾಹಕರು (ಆಯುರ್ವೇದ ತೈಲ, ಕೀಲುನೋವು ನಿವಾರಣೆಗೆ ಸಂಬಂಧಿಸಿ ತೈಲ, ಶೀತದ ಲಕ್ಷಣಗಳಿಗೆ ಬೇಕಾಗುವ ತೈಲಗಳು ಇತ್ಯಾದಿ) ಬುಕ್ ಆರ್ಡರ್ ಮಾಡುವ ಮೂಲಕವೂ ಖರೀದಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಬೇಕಾಗುವ ವಸ್ತುಗಳನ್ನು ಗ್ರಾಹಕರಿಗೆ ಪೂರೈಸಲು ಸಹಾಯವಾಗುತ್ತಿದೆ ಎಂದು ಹುಬ್ಬಳ್ಳಿ ಮೂಲದ ವೇದಗಿರಿ ಫಾರ್ಮಾಸ್ಯುಟಿಕಲ್ಸ್‌ನ ರಾಚಪ್ಪ ತಂಬರಳ್ಳಿ ತಿಳಿಸಿದ್ದಾರೆ.
ಬೆಳಗಾವಿ ನಿಲ್ದಾಣದಲ್ಲಿ ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಮೀನಾಕ್ಷಿ ಸ್ವಸಹಾಯ ಸಂಘಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಉದ್ಯಮಿಗಳು ಮುಂಚೂಣಿಗೆ ಬರಲು ಇದು ಸಹಾಯ ಮಾಡುವ ಜತೆಗೆ ಮಹಿಳೆಯರ ಸಬಲೀಕರಣವನ್ನು ಉತ್ತೇಜಿಸುತ್ತಿದೆ. ಮನೆಯಲ್ಲಿ ತಯಾರಿಸಿದ ತಿನಿಸುಗಳನ್ನು ಸುಲಭವಾಗಿ ಸಂಗ್ರಹಿಸಲು ಮತ್ತು ಪ್ರದರ್ಶಿಸಲು ಅನುವು ಮಾಡಿಕೊಟ್ಟಿರುವ ರೈಲ್ವೆ ಇಲಾಖೆಗೆ ಮೀನಾಕ್ಷಿ ಅಭಿನಂದಿಸಿದ್ದಾರೆ.
ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ವೈ.ಆರ್.ನಾಗಶ್ರೀ ಅವರಿಗೆ ರಾಗಿ ಮತ್ತು ಸಾವಯವ ಜೇನುತುಪ್ಪವನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ದಾವಣಗೆರೆ ರೈಲು ನಿಲ್ದಾಣದಲ್ಲಿ ಅಕ್ಕ ನಾಗಮ್ಮ ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಮಹಿಳಾ ಮಂಡಳಿಯ ಸಾಕಮ್ಮ ಖಾದಿ ಜವಳಿ ಮಾರಾಟ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಕೃಷಿ ಉತ್ಪನ್ನಗಳು ಮತ್ತು ಜವಳಿ ಉತ್ಪನ್ನಗಳ ಮಾರಾಟದ ಮಳಿಗೆ ನಡೆಸುತ್ತಿದೆ.