ವಿರಾಜಪೇಟೆ: ಅಮ್ಮತ್ತಿ ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ದಲಿತರು ಮತ್ತು ಬಡ ಕಾರ್ಮಿಕರು ಸ್ವಂತ ಸೂರು ಇಲ್ಲದೆ ಅನೇಕ ವರ್ಷಗಳಿಂದಲೂ ಬಾಡಿಗೆ ಹಾಗೂ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಮನೆ ನಿವೇಶನಕ್ಕಾಗಿ ಕಳೆದ 30 ವರ್ಷಗಳಿಂದಲೂ ಹೋರಾಟ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಿವೇಶನ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಎ.ಮಹದೇವ್ ಎಚ್ಚರಿಸಿದರು.
ವಿರಾಜಪೇಟೆ ಬಳಿಯ ಅಮ್ಮತ್ತಿ ಕಾರ್ಮಾಡು ಚೌಡೇಶ್ವರಿ ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೋರಾಟ ಸಮಿತಿಯಿಂದ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆ ಇಲ್ಲದವರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ನೀಡುವಂತೆ ತಾಲೂಕು ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಎದುರು ಅನೇಕ ಬಾರಿ ಪ್ರತಿಭಟನೆ ನಡೆಸಿ, ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇರುವ ಸರ್ಕಾರಿ ಜಾಗ ಉಳ್ಳವರ ಪಾಲಾಗಿದೆ. ಅಧಿಕಾರಿಗಳು ಉಳ್ಳವರ ಪರ ನಿಂತಿದ್ದಾರೆ ಎಂದು ದೂರಿದರು.
ಅಂಗನವಾಡಿ ಕಾರ್ಯಕರ್ತೆ ಮತ್ತು ಕಂದಾಯ ಅಧಿಕಾರಿ ಕೆಲವರ ಮತು ಕೇಳಿ ಇಲ್ಲಿನ ಹಲವು ಮತದಾರರ ಹೆಸರನ್ನೇ ಪಟ್ಟಿಯಿಂದ ತೆಗೆದಿದ್ದಾರೆ. ಈ ಸಂಬಂಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕಾರ್ಮಾಡು ಚೌಡೇಶ್ವರಿ ನಗರದ ಶೀಲಾ ಮಾತನಾಡಿ, ಕಾರ್ಮಾಡು ಪಂಚಾಯಿತಿಯವರು ನಿವೇಶನ ನೀಡುವುದಾಗಿ ಆಧಾರ್‌ಕಾರ್ಡ್, ಪಡಿತರ ಚೀಟಿ ಇತ್ಯಾದಿ ದಾಖಲೆಗಳನ್ನು ಪಡೆದುಕೊಂಡಿದ್ದರು. ಈಗ ಕೇಳಿದರೆ ನಿವೇಶನವೆ ಇಲ್ಲ ಎನ್ನುತ್ತಾರೆ. ನಾವು ತಿಂಗಳಿಗೊಂದು ಬಾಡಿಗೆ ಮನೆ ನೋಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಆರ್.ಹೊನ್ನಪ್ಪ, ಕೆ.ಜಿ.ಯಶೋದಾ, ಅಮ್ಮತಿ ಜಯಮ್ಮ, ಪಾಪಣ್ಣ, ಆರ್.ಶ್ರೀಧರ್, ಚೈತ್ರಾ ಗಣೇಶ್, ವೀಣಾ ಕುಮಾರಿ, ಕುಸುಮಾ ನಾರಾಯಣ, ಸುಶೀಲಾ ಮನೋಜ್, ವೇಲಾಯುದನ್, ಸುರೇಶ್, ಕುಮಾರ್ ಇತರರು ಇದ್ದರು.