ಜಿಲ್ಲೆ

ಜನಪದ ಹಾಡುಗಳಲ್ಲಿವೆ ಪಂಚಪೀಠ ತತ್ವಗಳು

ಕಂಪ್ಲಿ: ಜಗತ್ತಿನಲ್ಲಿ ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದೆ, ಯಾವುದನ್ನೂ ವಿರೋಧಿಸದೆ ಬದುಕುವ ಶೈಲಿಯನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ನಿಜವಾದ ವೀರಶೈವ ಲಿಂಗಾಯತರು ಎಂದು ಎಮ್ಮಿಗನೂರಿನ ಹಂಪಿಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಆದಿಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ, ಯುಗಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.

ಜಗದ್ಗುರು ರೇಣುಕಾಚಾರ್ಯರು ಸರ್ವರನ್ನೂ ಒಂದುಗೂಡಿಸುವ, ಸರ್ವರಿಗೂ ಹಿತವಾಗುವ ಧರ್ಮವನ್ನು ಬೋಧಿಸಿದ್ದಾರೆ. ಸನಾತನ ವೀರಶೈವ ಲಿಂಗಾಯತ ತತ್ವಗಳು ಪಂಚಪೀಠಗಳ ಪಂಚ ತತ್ವಗಳಲ್ಲಿವೆ. ಜನಪದ ಹಾಡುಗಳಲ್ಲಿಯೂ ಪಂಚಪೀಠಗಳ ತತ್ವಗಳು ಅಡಕವಾಗಿವೆ. ವೀರಶೈವ ಧರ್ಮವಾಚಕ ಪದ, ಲಿಂಗಾಯತ ಕ್ರಿಯಾವಾಚಕ ಪದವಾಗಿದ್ದು ಎರಡು ಪದಗಳು ಬೇರೆಯಲ್ಲ. ವ್ಯಾಟ್ಸಾೃಪ್, ಫೇಸ್‌ಬುಕ್ ನೋಡಿ ತಲೆಕೆಡಿಸಿಕೊಂಡು ಸಮಾಜದ ಸಾಮರಸ್ಯ ಕೆಡಿಸಬೇಡಿ ಎಂದರು.

ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಮಾತನಾಡಿ, ಬಸವ ಹಾಗೂ ರೇಣುಕರು ವೀರಶೈವರ ಲಿಂಗಾಯತರ ಎರಡು ಕಣ್ಣುಗಳಿದ್ದಂತೆ. ಸನಾತನ ಧರ್ಮ ಜಾಗೃತಿಗಾಗಿ ಆದಿಜಗದ್ಗುರು ರೇಣುಕರು ಜನಿಸಿದರು. ವೀರಶೈವ ಲಿಂಗಾಯತ ವ್ಯತ್ಯಾಸ ಮರೆಮಾಚಿ ಎಲ್ಲರೂ ಒಂದಾಗಬೇಕಿದೆ. ಸರ್ವರನ್ನೂ ಒಂದಾಗಿ ಕರೆದುಕೊಂಡು ಸಾಗುವ ಶಕ್ತಿಯನ್ನು ಪಂಚಪೀಠಗಳು ಹೊಂದಿವೆ ಎಂದರು.

ಬುಕ್ಕಸಾಗರ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಎಂ.ಎಸ್.ಶಶಿಧರಶಾಸ್ತ್ರಿ, ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ, ಘನಮಠದಯ್ಯ ಹಿರೇಮಠ, ಗೊಗ್ಗ ಚನ್ನಬಸವರಾಜ, ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಎಂ.ನಾಗರಾಜ, ಕೆ.ಎಂ.ವಾಗೀಶ, ಇಟಗಿ ಬಸವರಾಜಗೌಡ, ಎಲಿಗಾರ ವೆಂಕಟರೆಡ್ಡಿ, ವಾಲಿ ಕೊಟ್ರಪ್ಪ, ಬಿ.ಸದಾಶಿವಪ್ಪ, ಜೀರು ಗಾದಿಲಿಂಗ, ಎನ್.ಎಂ.ಪತ್ರೆಯ್ಯಸ್ವಾಮಿ, ಮುಕ್ಕುಂದಿ ಶಿವಗಂಗಮ್ಮ, ಎಸ್.ಡಿ.ಬಸವರಾಜ ಇತರರಿದ್ದರು.