ಶೃಂಗೇರಿ: ಜನಪದ ಸಾಹಿತ್ಯ ಮೌಖಿಕವಾಗಿ ಹರಡಿದ ಜಾನಪದ ಕಥೆಗಳು, ಹಾಡುಗಳು, ಗಾದೆಗಳು, ಒಗಟುಗಳು ಇತರ ಪ್ರಕಾರಗಳನ್ನು ಒಳಗೊಂಡಿದೆ. ಒಂದು ಸಮುದಾಯದ ಸಂಸ್ಕೃತಿ ಹಾಗೂ ಇತಿಹಾಸ ಪ್ರತಿಬಿಂಬಿಸುವ ಜನಪದ ಸಾಂಸ್ಕೃತಿಕ ನೆಲೆಗಟ್ಟಿನ ಅನನ್ಯವಾದ ಹೆಜ್ಜೆಗುರುತು ಎಂದು ಉಪನ್ಯಾಸಕ ಮಂಜುನಾಥ್ ಗೌಡ ಹೇಳಿದರು.
ಸಚ್ಚಿದಾನಂದಪುರ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಶುಕ್ರವಾರ ತಾಲೂಕು ಕರ್ನಾಟಕ ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಾನಪದ ಸಾಹಿತಿಗಳ ಬದುಕು-ಬರಹ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಅಸ್ತಿತ್ವ ರೂಪಿಸಲು ಜಾನಪದರು ಅನಾದಿಕಾಲದಿಂದ ಬೆವರಿನ ಶ್ರಮದಿಂದ ವ್ಯವಸ್ಥಿತ ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಸಂಸ್ಕೃತಿಯ ಮೂಲಬೇರು ಜನಪದ ಸಾಹಿತ್ಯ. ಇಂದಿಗೂ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಜನಪದದ ಸೊಗಡು ಪ್ರತಿಬಿಂಬಿತವಾಗಿದೆ ಎಂದರು.
ಜಿಲ್ಲಾ ಕಜಾಪ ಅಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ದಲಿತ, ಬಂಡಾಯ, ಶಿಷ್ಯ, ದಾಸ, ವಚನ ಹೀಗೆ ಎಲ್ಲ ಸಾಹಿತ್ಯದ ಮೂಲಬೇರು ಜಾನಪದವೇ ಆಗಿದೆ. ಜನಪದವು ನಮ್ಮೊಳಗಿನ ಸೃಜನಶೀಲತೆ ಮತ್ತು ಕಲ್ಪನೆ ಉತ್ತೇಜಿಸಲು ಇರುವ ಉನ್ನತ ಮೌಲ್ಯ ಎಂದರು.
ಉದ್ಯಮಿ ಗೋಕುಲ್‌ದಾಸ್ ನಾಯಕ್ ಮಾತನಾಡಿ, ಜನಪದ ಸಾಹಿತ್ಯ ಹಾಗೂ ಸಂಗೀತ ಸಂಸ್ಕೃತಿಯ ಪ್ರತೀಕ. ಸಾಂಸ್ಕೃತಿಕ ಸೊಗಡನ್ನು ಅನಾವರಣಗೊಳಿಸುವ ಜನಪದ ಮೌಲ್ಯಗಳ ಕುರಿತು ಯುವಪೀಳಿಗೆಗೆ ಮಾರ್ಗದರ್ಶನ ನೀಡುವ ಗುರುತರ ಜವಾಬ್ದಾರಿ ಪರಿಷತ್ತಿನ ಮೂಲ ಉದ್ದೇಶವಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಜಾನಪದ ಗೀತೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕು ಕಜಾಪ ಅಧ್ಯಕ್ಷ ಅಂಗುರ್ಡಿ ದಿನೇಶ್, ಸಾಹಿತಿಗಳಾದ ಬಿ.ಶಿವಶಂಕರ್, ಆಗುಂಬೆ ಗಣೇಶ್ ಹೆಗಡೆ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದ ಸ್ವಾಮಿ, ರೋಟರಿ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಇದ್ದರು.