ಮಳವಳ್ಳಿ ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಕಿನ್ನರಿ ನುಡಿಸಿದ ಹಾಗೂ ಸೋಬಾನೆ ಪದಗಳನ್ನು ಹಾಡಿದ ಜನಪದ ಕಲಾವಿದರನ್ನು ಗೌರವಿಸಲಾಯಿತು. ಪಿ.ಎಂ.ರಾಜು, ಮಹದೇವು, ಮಲ್ಲಣ್ಣ, ನಾಗರಾಜಪ್ಪ, ಜಯರಾಜು, ಅಕ್ಕಮ್ಮಲ್ಲನಹುಂಡಿ ಪಟೇಲಪ್ಪ, ಮಹದೇವು ಇದ್ದರು.  
ಜಿಲ್ಲೆ

ಜನಪದ ಸಂಸ್ಕೃತಿ ಉಳಿಸುವ ಹೊಣೆ ಎಲ್ಲರ ಮೇಲಿದೆ

ಮಳವಳ್ಳಿ: ಜೀವನದ ಅನುಭವವನ್ನು ಪದಗಳನ್ನಾಗಿ ಪೂರ್ವಜರು ಕಟ್ಟಿ ಹಾಡುತ್ತ ಜನಪದ ಸಂಸ್ಕೃತಿಯನ್ನು ಉಳಿಸಿದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಯರಾಜು ಹೇಳಿದರು.


ತಾಲೂಕಿನ ಪೂರಿಗಾಲಿ ಗ್ರಾಮದಲ್ಲಿ ಸೋಮವಾರ ನಾಗಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅಂದಿನ ಕಾಲಘಟ್ಟದಲ್ಲಿ ಜನರಿಗೆ ಜನಪದದ ಮೂಲಕ ಜಾಗೃತಿ ಸಂದೇಶವನ್ನು ನೀಡುತ್ತಿದ್ದರು. ಪ್ರಸ್ತುತ ನಶಿಸುತ್ತಿರುವ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.


ಮನರಂಜನೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯರು ಬದುಕಿನ ಬವಣೆ, ಸಂತಸ, ಸುಗ್ಗಿಯನ್ನು ಪ್ರಕೃತಿಯಲ್ಲಿನ ಸೊಬಗು ಹಾಗೂ ಕಾಣದ ದೈವಗಳಿಗೆ ಹೆಸರಿಟ್ಟುಕೊಂಡು ಹಾಡಿ ಸಂಭ್ರಮಿಸುತ್ತಿದ್ದರು. ಜನಪದದ ಭಾವನಾತ್ಮಕ ಸಾಹಿತ್ಯದ ಪದಗಳನ್ನು ಕೇಳಿ ಬಹಳಷ್ಟು ಜನರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಸುಂದರ ಜೀವನ ಕಂಡಿದ್ದಾರೆ. ಇಂಥ ಕಲೆಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವುದರಿಂದ ನಾಡಿನ ಸೊಗಡಿನ ಪ್ರತೀಕವಾಗಿರುವ ಜನಪದ ಸಂಸ್ಕೃತಿಯನ್ನು ಉಳಿಸಿ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.


ಮೂರು ಗಂಟೆಗೂ ಅಧಿಕ ಕಾಲ ಸೋಬಾನೆ, ರಾಗಿಕಲ್ಲು, ಜೋಗುಳ ಸೇರಿದಂತೆ ಹಲವು ಜನಪದ ಗೀತೆಗಳನ್ನು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ 13ಕ್ಕೂ ಹೆಚ್ಚು ಕಲಾ ತಂಡಗಳ ಕಲಾವಿದರು ಹಾಡಿದರು, ಕಲೆಗಳನ್ನು ಪ್ರದರ್ಶಿಸಿದರು.


ಗ್ರಾಪಂ ಮಾಜಿ ಚೇರ್ಮನ್ ಮಲ್ಲಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ಪಿ.ಎಂ.ರಾಜು, ಕಾರ್ಯದರ್ಶಿ ಮಹದೇವು, ಮುಖಂಡರಾದ ನಾಗರಾಜಪ್ಪ, ಅಕ್ಕಮ್ಮಲ್ಲನಹುಂಡಿ ಪಟೇಲಪ್ಪ, ಪೊಲೀಸ್ ಮಹದೇವು ಇತರರು ಇದ್ದರು.