ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾನಪದ ಕಲೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ಎಷ್ಟು ವಿಭಿನ್ನವಾಗಿದೆಯೋ ಅಷ್ಟೇ ಅಗಾಧವಾದ ವಿಸ್ತಾರ ಹೊಂದಿದೆ ಎಂದು ಜಾನಪದ ತಜ್ಞ ಡಾ. ಶ್ರೀಶೈಲ ಹುದ್ದಾರ ಹೇಳಿದರು.
ನಗರದ ಕರ್ನಾಟಕ ಸಂಘವು ಜಾನಪದ ಕಲಾವಿದೆ ಜಯಶ್ರೀ ಗುತ್ತಲ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೇಯರ್ ವೀಣಾ ಬರದ್ವಾಡ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿ, ಮಹಿಳೆಯರೆ ಜಾನಪದ ಮೂಲ ಜೀವಾಳ. ಮಹಿಳೆಯರೇ ಇಂದು ಜಾನಪದ ಉಳಿಸಿ ಬೆಳೆಸುತ್ತಿರುವರು. ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣನ್ನು ವೇದಿಕೆ ಹತ್ತಿಸಿ, ಮೂಲ ಜಾನಪದ ಹಾಡುಗಳ ಮೂಲಕ ಮಹಿಳೆಯರಿಗೆ ಸ್ಪರ್ಧೆ ಏರ್ಪಡಿಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದರು.
ಧಾರವಾಡದ ಮಂದಸ್ಮಿತಾ ಮಹಿಳಾ ಮಂಡಳ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2023 ಪಡೆಯಿತು. ಹುಬ್ಬಳ್ಳಿಯ ಕಲ್ಯಾಣ ಮಹಿಳಾ ಮಂಡಳ ದ್ವಿತೀಯ, ಬೈಲಹೊಂಗಲದ ವೇಣುಮಾಧವ ಭಜನಾ ಮಂಡಳ ತೃತೀಯ ಹಾಗೂ ಗೋಕಾಕದ ಶ್ರೀ ಸತ್ಯವೀರತೀರ್ಥ ಭಜನಾ ಮಂಡಳ ಸಮಾಧಾನಕರ ಬಹುಮಾನ ಪಡೆದವು.
ಮಾಜಿ ಮೇಯರ್ ಪೂರ್ಣಾ ಪಾಟೀಲ, ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಎನ್. ಆರ್. ಕುಲಕರ್ಣಿ, ಬಸವಪ್ರಭು ಹೊಸಕೇರಿ, ಡಾ. ಶ್ರೀಧರ ಕುಲಕರ್ಣಿ ಮಾತನಾಡಿದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಪೂರ್ವ ಏರ್ಪಡಿಸಿದ್ದ ಜಾನಪದ ಹಾಡುಗಳ ಸ್ಪರ್ಧೆಯಲ್ಲಿ ವಿವಿಧ ನಗರಗಳಿಂದ 20ಕ್ಕೂ ಹೆಚ್ಚು ಮಹಿಳಾ ಹಾಗೂ ಭಜನಾ ಮಂಡಳಗಳು ಭಾಗವಹಿಸಿದ್ದವು. ಸ್ಪರ್ಧೆ ನಿರ್ಣಾಯಕರಾಗಿ ಡಾ. ಶ್ರೀಧರ ಕುಲಕರ್ಣಿ, ಸುಪ್ರಿಯಾ ಭಟ್ ಹಾಗೂ ವಿಶ್ವೇಶ್ವರಿ ಹಿರೇಮಠ ಕಾರ್ಯ ನಿರ್ವಹಿಸಿದರು.
ಡಾ. ಕೃತಿಕಾ ಗುತ್ತಲ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ನಿಂಗಣ್ಣ ಕುಂಟಿ, ಪಂ. ನಟರಾಜ ಮಹಾಜನ್, ವಿದ್ಯಾ ಗುತ್ತಲ, ಆರ್.ಬಿ. ವಾಡಪ್ಪಿ, ಡಿ.ಎಂ. ಸಿಂದಗಿ, ಜಿ.ಎಸ್. ತೊರಗಲ್ಲಮಠ, ಜಿ.ಎಲ್. ಪಾಟೀಲ, ಅಶೋಕ ಪಟಾತ, ಇತರರು ಇದ್ದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ದತ್ತಿ ದಾನಿ ಎಸ್.ಬಿ.ಗುತ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.