ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ದಿಬ್ಬೊರು ಗ್ರಾಮದಲ್ಲಿ ‘ಬೆಳಕಿನೆಡೆಗೆ’ ಅರಿವಿನ ಜಾಗೃತಿ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಶಿಕ್ಷಕ ಎಚ್.ಎಸ್.ಮಂಜಪ್ಪ ಮಾತನಾಡಿ, ವಿದ್ಯೆ ಹಾಗೂ ಸಂಸ್ಕಾರ ಯುವ ಜನಾಂಗಕ್ಕೆ ಅತ್ಯವಶ್ಯ. ವ್ಯಕ್ತಿ ಚಾರಿತ್ರ್ಯ ಹಾಗೂ ಗುಣ ಸಂಪನ್ನನಾದರೆ ಸ್ವಾಸ್ಥ್ಯಪೂರ್ಣವಾದ ಸಮಾಜವು ತಾನಾಗಿಯೇ ನಿರ್ಮಾಣವಾಗುತ್ತದೆ. ಜನಪದ ಕಲೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಮಂಟೇಸ್ವಾಮಿ ಹಾಗೂ ಅವರ ಶಿಷ್ಯರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಸಮಾಜದಲ್ಲಿ ನೆಲೆಯೂರಿದ್ದ ಮೌಢ್ಯಗಳ ನಿವಾರಣೆಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಮಂಟೇಸ್ವಾಮಿ ಜಾನಪದ ಕಾವ್ಯವನ್ನು ದಿಬ್ಬೊರು ಗ್ರಾಮದಲ್ಲಿ ಇಂದು ನೀಲಗಾರ ಕಲಾವಿದರು ಪ್ರಸ್ತುತಪಡಿಸುತ್ತಿರುವುದು ಸಂತಸ ಎಂದರು.
ಜಾನಪದ ಪರಿಷತ್ ಅಧ್ಯಕ್ಷ ಬಿ.ಪರಮೇಶ್ ಮಾತನಾಡಿ, ಜನರನ್ನು ಸಾತ್ವಿಕ ಚಿಂತನೆಗಳತ್ತ ಸಾಗಿಸುವ ಇಂತಹ ಅಪರೂಪದ ಕಾರ್ಯಕ್ರಮಗಳು ನಿರಂತರವಾಗಿ ಹಳ್ಳಿಗಳಲ್ಲಿ ನಡೆಯಬೇಕು ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ.ಆರ್.ಗುರುಮೂರ್ತಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಪ್ರತಿ ತಿಂಗಳು ಜನರಿಗೆ ಅರಿವು ನೀಡುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿ, ಶಿಕ್ಷಣ, ಉದ್ಯೋಗ, ಹೈನುಗಾರಿಕೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ವಿವಿಧ ಪ್ರಕಾರದ ಕಲಾ ತಂಡಗಳನ್ನು ಆಹ್ವಾನಿಸಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಯುವಜನಾಂಗದಲ್ಲಿ ಉತ್ತಮ ಅಭಿರುಚಿಗಳನ್ನು ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಕೊಳ್ಳೇಗಾಲ ತಾಲೂಕು ಸಿದ್ದಯ್ಯನಪುರದಿಂದ ಆಗಮಿಸಿದ್ದ ನೀಲಗಾರ ಕಲಾವಿದರಾದ ಎಂ.ಕೈಲಾಸ ಮೂರ್ತಿ ಹಾಗೂ ಸಂಗಡಿಗರು, ಮಂಟೇಸ್ವಾಮಿ ಜಾನಪದ ಕಾವ್ಯ ಗಾಯನವನ್ನು ಪ್ರಸ್ತುತಪಡಿಸಿದರು. ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಅಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಡಿ.ಎಸ್.ಪ್ರಕಾಶ್, ಶೇಖರ್, ಕಾರ್ಯಕ್ರಮದ ಸಂಚಾಲಕ ತಬಲಾ ಮಹೇಶ್, ಸುಧಾಕರ್, ಗುಂಡಜ್ಜ ಮಹೇಶ್, ಚೌಡಪ್ಪ, ಡಿ.ಎನ್.ಯೋಗೇಶ್, ಸಾಹಿತಿ ದಿಬ್ಬೊರು ರಮೇಶ್ ಹಾಜರಿದ್ದರು.