ಜಿಲ್ಲೆ

ಜನಪದ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಡಾ.ಹಂಪನಹಳ್ಳಿ ತಿಮ್ಮೇಗೌಡ ಕರೆ

 ಹಾಸನ: ಭಾರತೀಯ ಸಂಸ್ಕೃತಿಯ ಬೇರುಗಳು ಜಾನಪದದಲ್ಲಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಜಾಗೃತಿ ಕಲಾ ಸಂಸ್ಥೆ, ಜಾಗರವಳ್ಳಿ, ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಜಾಗರವಳ್ಳಿಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಜಾನಪದ ಉತ್ಸವ ಮತ್ತು ವಿಚಾರ ಸಂಕಿರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತಿಯ ಬೆಳೆವಣಿಗೆಗೆ ಯುವ ಜನತೆ ಮುಂದಾಗಬೇಕು ಎಂದು ಕರೆ ನೀಡಿದರು.

ಹಳ್ಳಿಯಲ್ಲಿ ಹುಟ್ಟಿದ ಜಾನಪದ ಕಲೆ, ಜಾನಪದ ಸಾಹಿತ್ಯ ಇವತ್ತು ಹಳ್ಳಿಯವರಿಗೂ ಬೇಡವಾಗುತ್ತಿರುವುದು ವಿಷಾದನೀಯ. ಜಾನಪದ ಕಲೆಗೆ ಇರುವ ಶಕ್ತಿ ಬೇರಾವ ಕಲೆಗಳಲ್ಲಿಯೂ ಕಾಣಲು ಸಾಧ್ಯವಿಲ್ಲ. ಇದು ಶ್ರೀಮಂತ ಕಲೆ. ಆದರೆ ಕಲಾವಿದರು ಮಾತ್ರ ಬಡವರು. ಜಾನಪದ ಕಲೆ ಕೇವಲ ಮನರಂಜನೆಗಾಗಿ ಇರುವಂತಹದ್ದಲ್ಲ. ಜಾನಪದದಲ್ಲಿ ಶಿಕ್ಷಣ ಇದೆ. ನೀತಿ ಇದೆ. ಜೀವನದ ಮೌಲ್ಯಗಳಿವೆ. ಆದ್ದರಿಂದ ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಲಾವಿದರು ಉಳಿದರೆ ಕಲೆ ಉಳಿಯುತ್ತದೆ. ಕಲೆ ಉಳಿಯಲು ಪ್ರೇಕ್ಷಕರು, ಪ್ರೋತ್ಸಾಹ ಅವಶ್ಯಕ. ಇಂದಿನ ಹಲವಾರು ಅವಾಂತರಗಳಿಂದ ಬಿಡುಗಡೆ ಪಡೆಯಲು ಜಾನಪದಕ್ಕೆ ಮೊರೆ ಹೋಗಬೇಕಾದುದು ಅವಶ್ಯಕ. ಏಕೆಂದರೆ ಜಾನಪದ ಜಾತಿ,ಧರ್ಮಗಳನ್ನು ಮೀರಿ ಜನರನ್ನು ಬೆಸೆಯುವ, ಹೊಸೆಯುವ ತಾಕತ್ತು ಅದಕ್ಕೆ ಇದೆ. ಆದ್ದರಿಂದಲೇ ಜಾನಪದವನ್ನು ಜಾತ್ಯತೀತ, ಧರ್ಮಾತೀತ, ಲಿಂಗಾತೀತ ಎನ್ನುತ್ತೇವೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಅವರು ಮಾತನಾಡಿ, ಜಾನಪದ ನಮ್ಮ ಎಲ್ಲಾ ಸಂಸ್ಕೃತಿಗಳ ತಾಯಿ ಬೇರು. ಅದು ಶತ ಶತಮಾನಗಳಿಂದ ನಮಗೆ ಮನರಂಜನೆಯ ಜತೆಗೆ ಜೀವನ ಮೌಲ್ಯ, ಬದುಕಿನ ಆದರ್ಶಗಳನ್ನು ಹೇಳಿಕೊಟ್ಟಿದೆ. ಆಧುನಿಕ ಜೀವನ ಶೈಲಿಯಿಂದ ಜಾನಪದ ಸಂಸ್ಕೃತಿ ಮಾಯವಾಗುತ್ತಿರುವುದು ವಿಷಾದನೀಯ. ಮೊಬೈಲ್ ಯುವ ಸಮುದಾಯದ ಜೀವನ ಶೈಲಿ ಬದಲಾಯಿಸುತ್ತಿದೆ. ಮನುಷ್ಯರ ನಡುವಿನ ಬಾಂಧವ್ಯ ಬೆಸೆಯುವ ಸ್ವರೂಪ ಬದಲಾಯಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಲಾವಿದರು ಹಾಗೂ ಉಪನ್ಯಾಸಕ ತಟ್ಟೆಕೆರೆ ಲಕ್ಷಣ್, ಗ್ರಾಮ ಪಂಚಾಯತಿ ಅಧ್ಯಕ್ಷ ನಂಜೇಗೌಡ, ಕಲಾವಿದ ಬಿ.ಟಿ ಮಾನವ, ವಾಲ್ಮೀಕಿ ಮಹಿಳಾ ಜಾನಪದ ಕಲಾ ಸಂಘದ ಅಧ್ಯಕ್ಷರಾದ ನೀಲಮ್ಮ, ಮತ್ತಿತರರು ಹಾಜರಿದ್ದರು.