ಜಿಲ್ಲೆ

ಜನನ-ಮರಣಗಳ ನಡುವಿನ ಸಾರ್ಥಕವಾಗಿರಲಿ ಬದುಕು

ಚಿತ್ರದುರ್ಗ: ಜನನ-ಮರಣದ ನಡುವೆ ನಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದು ಜಗಳೂರು ಕಣ್ವಕುಪ್ಪೆ ತಪೋಕ್ಷೇತ್ರದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಚಿತ್ರದುರ್ಗದ ಅಭಿಷೇಕ್ ಎಸ್. ಪಟೇಲ್ ಪ್ರತಿಷ್ಠಾನ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಬಸವೇಶ್ವರ ಆಸ್ಪತ್ರೆ, ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್, ರೋಟರಿ ಚಿನ್ಮೂಲಾದ್ರಿ, ಇನ್ನರ್‌ವ್ಹೀಲ್, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ದಿ.ಅಭಿಷೇಕ್ ಎಸ್.ಪಟೇಲ್ ಮೊದಲನೇ ಪುಣ್ಯಸ್ಮರಣಾರ್ಥ ತಾಲೂಕಿನ ಸಿದ್ದಾಪುರದ ಆದರ್ಶ ಟ್ರೇಡಿಂಗ್ ಕಂಪನಿ ಗೋದಾಮು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ನೇತ್ರದಾನ ಜಾಗೃತಿ, ನೋಂದಣಿ, ನೇತ್ರ ತಪಾಸಣೆ-ಶಸ್ತ್ರ ಚಿಕಿತ್ಸೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇಂಥಲ್ಲೇ ಜನಿಸಬೇಕು ಎಂದರೆ ಆಗದು, ಸಾವು ಕೂಡ ಎಲ್ಲಿ, ಯಾವಾಗ ಬೇಕಾದರೂ ಸಂಭವಿಸಬಹುದು. ಇರುವಷ್ಟು ಕಾಲ ನಮ್ಮ ಬದುಕು ಬೇರೆಯವರಿಗೆ ಮಾದರಿಯಾಗಿರಲಿ. ಸಂಪತ್ತು, ಅಧಿಕಾರ ಸಮಾಜ ಸೇವೆಗೆ ಸದ್ಬಳಕೆಯಾಗಲಿ ಎಂದರು.

ಮಲೇಷ್ಯಾದಲ್ಲಿ ಈಚೆಗೆ ವಿಜಯವಾಣಿ ವಿಜಯರತ್ನ ಇಂಟರ್‌ನ್ಯಾಷನಲ್ ಪ್ರಶಸ್ತಿಗೆ ಭಾಜನ ರಾದ ಪಟೇಲ್ ಶಿವಕುಮಾರ್ ಅವರನ್ನು ಗೌರವಿಸಿ ನೇತ್ರದಾನ ಜಾಗೃತಿ ಭಿತ್ತಿಪತ್ರ, ನೋಂದಣಿ ನಮೂನೆ ಬಿಡುಗಡೆ ಮಾಡಿದರು.

ಎಂಎಲ್‌ಸಿ ಕೆ.ಎಸ್. ನವೀನ್ ಮಾತನಾಡಿ, ಪುತ್ರನ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ ಎಂದರು.

ಬಿಜೆಪಿ ಮುಖಂಡ ಜಿ.ಎಸ್. ಅನಿತ್‌ಕುಮಾರ್, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿದರು.

ಬಸವೇಶ್ವರ ಐ ಬ್ಯಾಂಕ್‌ನ ಗಾಯತ್ರಿ ಶಿವರಾಂ ಮಾತನಾಡಿ, ಆ.25ರಿಂದ ಸೆಪ್ಟೆಂಬರ್ 8ರವರೆಗೆ ನೇತ್ರದಾನ ಜಾಗೃತಿ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದರು.

ಡಾ.ಝಾನ್ಸಿ ರಕ್ತದಾನ ಕುರಿತು ಮಧುಪ್ರಸಾದ್ ರೋಟರಿ ಸೇವೆ ಕುರಿತು ಮಾಹಿತಿ ನೀಡಿದರು. ಪಟೇಲ್ ಗೌಡರ ರುದ್ರಪ್ಪ, ಬಿಜೆಪಿ ಮುಖಂಡ ಡಾ.ಸಿದ್ಧಾರ್ಥ ಗುಂಡಾರ್ಪಿ, ಎಸ್. ವೀರಭದ್ರಸ್ವಾಮಿ, ಎಸ್.ವೀರೇಶ್, ಶಿವಕುಮಾರ್ ಕುಟುಂಬ ವರ್ಗದವರು ಇದ್ದರು.

ರೋಟರಿ ಸಂಸ್ಥೆಗೆ ಆರ್ಥಿಕ ನೆರವಿನ ಚೆಕ್ ವಿತರಿಸಿದ ಶಿವಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹಾಪೋಷಕ ಸದಸ್ಯರಾಗಿ ನೋಂದಾಯಿಸಿಕೊಂಡರು.

---

ಕೋಟ್

ಅಭಿಷೇಕ್ ಸ್ಮರಣಾರ್ಥ ಸಮಾಜಕ್ಕೆ ನೆರವಾಗುವ ಮೂಲಕ ಶಿವಕುಮಾರ್ ತಮ್ಮ ಮಗನ ಸಾವಿನ ನೋವು ಮರೆಯುತ್ತಿದ್ದಾರೆ. ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ.

ಜಿ.ಎಚ್. ತಿಪ್ಪಾರೆಡ್ಡಿ, ಮಾಜಿ ಶಾಸಕರು.

-----

ವಿಜಯರತ್ನ ಇಂಟರ್ ನ್ಯಾಷನಲ್ ಪ್ರಶಸ್ತಿಗೆ ಶಿವಕುಮಾರ್ ಭಾಜನರಾಗಿರುವುದು ಅವರ ಬಹು ಉಪಯೋಗಿ ಕೆಲಸಗಳಿಗೆ ಸಂದ ಗೌರವವಾಗಿದೆ.

ಎಸ್.ಲಿಂಗಮೂರ್ತಿ,ಮಾಜಿ ಅಧ್ಯಕ್ಷ,ರಾಜ್ಯ ಖನಿಜ ನಿಗಮ.

ನಮ್ಮ ಆದಾಯದಲ್ಲಿ ಒಂದಿಷ್ಟನ್ನು ಸಮಾಜಕ್ಕೆ ಉಪಯೋಗಿಸಬೇಕು. ವಿಜಯರತ್ನ ಇಂಟರ್‌ನ್ಯಾಷನಲ್ ಅವಾರ್ಡ್ ಸಂದಿರುವುದು ಅವರ ಸಾಮಾಜಿಕ ಸೇವೆಗೆ ಸಾಕ್ಷಿ.

ಎಸ್. ಕೆ. ಬಸವರಾಜನ್, ಮಾಜಿ ಶಾಸಕ.

---------