ಜಿಲ್ಲೆ

ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತ

ಬೇಲೂರು: ಸಾರ್ವಜನಿಕರ ಕೆಲಸಗಳು ವಿಳಂಬವಾಗದಂತೆ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು ಎಂದು ಎಚ್.ಕೆ.ಸುರೇಶ್ ಹೇಳಿದರು.


ಪಟ್ಟಣದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ತೆರೆದಿರುವ ಶಾಸಕರ ಕಚೇರಿ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಪ್ರತಿ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕಚೇರಿಯಲ್ಲಿದ್ದು ಜನರ ಕುಂದುಕೊರತೆ ನಿವಾರಿಸಲು ಗಮನಹರಿಸಲಾಗುವುದು. ಯಾವುದೇ, ಇಲಾಖೆಯಲ್ಲಿ ಭಷ್ಟಾಚಾರ ಕಂಡುಬಂದರೆ ಖುದ್ದಾಗಿ ನನಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.


ಕ್ಷೇತ್ರದ ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ನಾನು ಗೆಲ್ಲುವವರೆಗೆ ಒಂದು ಪಕ್ಷಕ್ಕೆ ಸೀಮಿತವಾಗಿದ್ದೆ, ಆದರೆ ಈಗ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಂದು ಧರ್ಮಕ್ಕೆ ಸೀಮಿತವಾಗದೆ ಕ್ಷೇತ್ರದಲ್ಲಿ ಸಂಚರಿಸಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ. ಜತೆಗೆ ಪ್ರತಿ ಸೋಮವಾರ ಪೂರ್ತಿ ದಿನ ಹಾಗೂ ಇತರ ದಿನಗಳಲ್ಲಿ ಸಾಧ್ಯವಾದಷ್ಟು ದಿನ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆ ಆಲಿಸಿ ಅಧಿಕಾರಿಗಳಿಂದ ಪರಿಹಾರ ಕೊಡಿಸುವ ಸಂಕಲ್ಪ ಹೊಂದಿದ್ದೇನೆ. ಕಚೇರಿಯಲ್ಲಿ ಪ್ರತಿನಿತ್ಯ ಅಧಿಕೃತವಾಗಿ ನನ್ನ ಅಪ್ತ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಕಾರ್ಯನಿರ್ವಹಿಸಲಿದ್ದಾರೆ. ಕಲಾಪ ನಡೆಯುವ ದಿನ ಹೊರತುಪಡಿಸಿದರೆ ಉಳಿದಂತೆ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದೇನೆ. ಈಗಾಗಲೇ ಕಳೆದ ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.


ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ದಯಾನಂದ್, ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ತಾಪಂ ಮಾಜಿ ಸದಸ್ಯ ಪರ್ವತಯ್ಯ, ಮುಖಂಡರಾದ ಜಿ.ಕೆ.ಕುಮಾರ್, ಪೈಂಟ್ ರವಿ, ನಿವೃತ್ತ ಪಾಂಶುಪಾಲ ಪ್ರೊ.ಜಯಣ್ಣಗೌಡ, ಕರ್ಕಿಹಳ್ಳಿ ರಮೇಶ್, ಪ್ರಸಾದಿಹಳ್ಳಿ ಶಿವರಾಜ್, ತೀರ್ಥಂಕರ್, ಮಂಜುನಾಥ, ಗಂಗೇಶ್, ಶಿವಣ್ಣ, ಶೋಭಾಗಣೇಶ್, ವಕೀಲರಾದ ಲಿಂಗೇಶ್, ಸಿ.ಎಂ.ನಿಂಗರಾಜು, ಪುರಸಭಾ ಸದಸ್ಯೆ ರತ್ನಸತ್ಯ ನಾರಾಯಣ್, ಅಪ್ತ ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ ಇತರರಿದ್ದರು.