ಜಿಲ್ಲೆ

ಜನತಾ ಕರ್ಫ್ಯೂಗೆ ಮುಂಡರಗಿ ಸ್ತಬ್ಧ

ಮುಂಡರಗಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಪ್ರಧಾನಿ ಮೋದಿ ಅವರು ಭಾನುವಾರ ಕರೆ ನೀಡಿದ್ದ ಸ್ವಯಂಪ್ರೇರಿತ ಜನತಾ ಕರ್ಫ್ಯೂಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಸಾರ್ವಜನಿಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಮುಖ್ಯಬಜಾರ್, ಸಂತೆ ಮಾರುಕಟ್ಟೆ, ಹೋಟೆಲ್, ಅಂಗಡಿ ಮುಗ್ಗಟ್ಟುಗಳು ಬಂದಾಗಿದ್ದವು. ಕೆಎಸ್​ಆರ್​ಟಿಸಿ ಬಸ್ ಸೇರಿ ಎಲ್ಲ ಖಾಸಗಿ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು. ಪ್ರತಿದಿನ ಜನಜಂಗುಳಿಯಿಂದ ತುಂಬಿರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಿಶಬ್ಧ ವಾತಾವರಣ ಕಂಡು ಬಂತು.

ಬೆಳಗಿನ ಜಾವ ಬೆಂಗಳೂರು, ಧರ್ಮಸ್ಥಳ ಭಾಗದಿಂದ ಬಂದಂತ ಬಸ್​ಗಳಲ್ಲಿನ ಪ್ರಯಾಣಿಕರು ತಮ್ಮ-ತಮ್ಮ ಮನೆಗಳಿಂದ ವಾಹನ ಕರೆಯಿಸಿಕೊಂಡು ತೆರಳಿದರು. ಇನ್ನೂ ಗ್ರಾಮೀಣ ಭಾಗದ ಜನರು ಬೆಳಗಿನ ಜಾವದಲ್ಲಿ ಇದ್ದಂತ ಆಟೋ ಸಹಾಯದಿಂದ ತಮ್ಮ ಊರುಗಳಿಗೆ ತೆರಳಿದರು.

ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ಐದು ಜನರಿಗಿಂತ ಹೆಚ್ಚು ಜನರು ಒಂದೆಡೆ ಸೇರುವುದು, ಓಡಾಡುವುದು ಕಂಡು ಬರಲಿಲ್ಲ.

ಊಟ, ಉಪಾಹಾರಕ್ಕೆ ಪರದಾಟ: ಜನತಾ ಕರ್ಫ್ಯೂನಿಂದಾಗಿ ಹೋಟೆಲ್​ಗಳು ಬಂದಾಗಿದ್ದರಿಂದ ತಾಲೂಕಾಸ್ಪತ್ರೆಯಲ್ಲಿನ ಒಳರೋಗಿಗಳು ಉಪಾಹಾರ ಮತ್ತು ಊಟಕ್ಕೆ ಪರದಾಡುವಂತ ಸ್ಥಿತಿ ನಿರ್ವಣವಾಗಿತ್ತು. ಈ ವಿಷಯ ತಿಳಿದ ವಿಜಯವಾಣಿ ಪ್ರತಿನಿಧಿ ಆಸ್ಪತ್ರೆಗೆ ತೆರಳಿ ರೋಗಿಗಳು ಮತ್ತು ಅವರ ಸಂಬಂಧಿ ವಿಚಾರಿಸಿದಾಗ ಹೊರಗಡೆ ಹೋಟೆಲ್ ಬಂದ್ ಇರುವುದರಿಂದ ಉಪಾಹಾರ, ಊಟ ಸಿಗುತ್ತಿಲ್ಲ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಗ ವಿಜಯವಾಣಿ ಪ್ರತಿನಿಧಿಯು ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ ಅವರಿಗೆ ದೂರವಾಣಿ ಮೂಲಕ ಸಂರ್ಪಸಿ ಆಸ್ಪತ್ರೆಯ ಒಳರೋಗಿಗಳ ಸಮಸ್ಯೆ ತಿಳಿಸಿದರು. ಆಗ ಪ್ರತಿಕ್ರಿಯಿಸಿದ ಡಾ. ಕೀರ್ತಿಹಾಸ, ಪ್ರತಿದಿನ ಆಸ್ಪತ್ರೆಯಲ್ಲಿ ಹೆರಿಗೆ, ಬಾಣಂತಿಯರಿಗೆ ಉಪಾಹಾರ, ಊಟ ನೀಡಲಾಗುತ್ತದೆ. ಜನರಲ್ ಪೆಸೆಂಟ್​ಗಳು ಹೊರಗಡೆ ಹೋಟೆಲ್​ನಿಂದ ತರುತ್ತಾರೆ. ಈಗ ಹೋಟೆಲ್ ಬಂದಿರುವುದರಿಂದಾಗಿ ಹೆರಿಗೆ, ಬಾಣಂತಿಯರಿಗೆ ನೀಡಲಾಗುವ ಉಪಾಹಾರ, ಊಟವನ್ನು ಹೊರರೋಗಿಗಳಿಗೂ ನೀಡುವ ವ್ಯವಸ್ಥೆ ಮಾಡುವಂತೆ ಸಿಬ್ಬಂದಿಗೆ ತಿಳಿಸಲಾಗುವುದು ಎಂದು ಹೇಳಿದರು.