ಜಿಲ್ಲೆ

ಜನತಾ ಕರ್ಫ್ಯೂ ಸ್ವರೂಪದಲ್ಲೇ ಬಂದ್

ಧಾರವಾಡ: ಲಾಕ್​ಡೌನ್ ಸಡಿಲಿಕೆ ಮಧ್ಯೆಯೂ ಕೇಂದ್ರ ಸರ್ಕಾರ ಭಾನುವಾರ ಜಾರಿ ಮಾಡಿರುವ ಕರೊನಾ ಕರ್ಫ್ಯೂ ಒಂದು ರೀತಿಯಲ್ಲಿ ಜನತಾ ಕರ್ಫ್ಯೂ ಸ್ವರೂಪ ಪಡೆದಿದ್ದು ವಿಶೇಷವಾಗಿತ್ತು. ಕರ್ಫ್ಯೂಗೆ ಜನರು ಸ್ಪಂದಿಸಿದ್ದು, ಇಡೀ ನಗರವೇ ಸ್ತಬ್ಧವಾಗಿತ್ತು.

ಲಾಕ್​ಡೌನ್ ಸಡಿಲಿಕೆ ಮಧ್ಯೆಯೂ ರಾಜ್ಯ ಸರ್ಕಾರ ಕೆಲ ಚಟುವಟಿಕೆಗಳಿಗೆ ವಿನಾಯಿತಿ ನೀಡಿದ್ದರಿಂದ ಸದಾ ಜನರಿಂದ ಕೂಡಿರುತ್ತಿದ್ದ ನಗರವೇ ಖಾಲಿ ಖಾಲಿಯಾಗಿತ್ತು. ನಗರ ಸಾರಿಗೆ ಸೇರಿ ಯಾವುದೇ ವಾಹನಗಳು ರಸ್ತೆಗಿಳಿದಿರಲಿಲ್ಲ. ಅಲ್ಲಲ್ಲಿ ಕೆಲ ವಾಹನಗಳು ಕಾಣಿಸುತ್ತಿದ್ದವೆ ಹೊರತು, ಜನನಿಬಿಡಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣಗಳೂ ಬಿಕೋ ಎನ್ನುತ್ತಿದ್ದವು.

ಜನರ ನಿತ್ಯ ಜೀವನಕ್ಕೆ ಅಗತ್ಯವಾಗಿರುವ ಹಾಲು, ಔಷಧಗಳು, ಪೆಟ್ರೋಲ್ ಬಂಕ್, ತರಕಾರಿ, ಹೋಟೆಲ್​ನಲ್ಲಿ ಪಾರ್ಸಲ್, ಮಾಂಸ ಮಾರಾಟ ಹೀಗೆ ಕೆಲ ಅಗತ್ಯ ವಸ್ತುಗಳ ಮಾರಾಟಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ, ಜನರು ಶನಿವಾರ ವಸ್ತುಗಳನ್ನು ಖರೀದಿ ಮಾಡಿದ್ದರಿಂದ ಭಾನುವಾರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಾಣಲಿಲ್ಲ.

ಸಂಪೂರ್ಣ ಲಾಕ್​ಡೌನ್ ವಿಧಿಸಿದ್ದ ಸಂದರ್ಭದಲ್ಲಿ ಜನರು ಏನಾದರೂ ನೆಪ ಹೇಳಿ ಓಡಾಟ ನಡೆಸಿದ್ದರು. ಆದರೆ, ಭಾನುವಾರ ಮಾತ್ರ ಸುಖಾಸುಮ್ಮನೆ ಓಡಾಟ ನಡೆಸುವವರೂ ಮನೆಯಲ್ಲೇ ಇದ್ದರು. ಇದೇ ಕಾರಣಕ್ಕೆ ಕರೊನಾ ಕರ್ಫ್ಯೂ ಮಾ. 22ರ ಜನತಾ ಕರ್ಫ್ಯೂ ಸ್ವರೂಪವನ್ನೇ ಪಡೆದಂತಾಗಿತ್ತು.

ಎಂದಿನಂತೆ ಕಾರ್ಯ: ಕರ್ಫ್ಯೂ ಕರೆ ಹಿನ್ನೆಲೆಯಲ್ಲಿ ಇಡೀ ನಗರ ಸ್ತಬ್ಧವಾಗಿದ್ದರೆ ಪೌರ ಕಾರ್ವಿುಕರು ಮಾತ್ರ ಎಂದಿನಂತೆ ತಮ್ಮ ಕಾರ್ಯದಲ್ಲಿ ನಿರತರಾಗಿದ್ದರು. ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸ್ವಚ್ಛತೆಗೆ ಆದ್ಯತೆ ನೀಡಿದ ಕಾರಣ ಪೌರ ಕಾರ್ವಿುಕರಿಗೆ ರಜೆ ಇರಲಿಲ್ಲ. ಆದರೆ, ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಾರ್ಯ ನಿರ್ವಹಿಸುತ್ತಿದ್ದರು.

ಪೊಲೀಸರಿಂದ ತಿಳಿವಳಿಕೆ: ಇಡೀ ನಗರ ಸ್ತಬ್ಧವಾಗಿದ್ದರೂ ಕೆಲವೇ ಕೆಲವರು ಬೈಕ್​ಗಳ ಮೇಲೆ ಓಡಾಟ ನಡೆಸಿದ್ದರು. ಇಂತಹವರನ್ನು ಕೆಲ ಕಡೆಗಳಲ್ಲಿ ಪೊಲೀಸರು ತಡೆದು ವಿಚಾರಣೆ ನಡೆಸುತ್ತಿದ್ದರು. ಅಗತ್ಯ ಕಾರ್ಯಗಳಿಗೆ ತೆರಳುತ್ತಿದ್ದರೆ ಸುಮ್ಮನೆ ಬಿಡುತ್ತಿದ್ದ ಪೊಲೀಸರು, ಉಳಿದವರಿಗೆ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಇದರ ಗಂಭೀರತೆ ಅರಿತು ಮನೆಯಲ್ಲೇ ಇರಿ ಎಂದು ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿದ್ದರು.