ಕಲಬುರಗಿ: ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣ. ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಜನತಂತ್ರ ಸಂಸದೀಯ ಪರಿಕಲ್ಪನೆ ಕೊಟ್ಟವರು ಬಸವಣ್ಣ ಎಂದು ವಿಜಯಪುರದ ಸಾಂಸ್ಕೃತಿಕ ಚಿಂತಕ ಡಾ.ಜೆ.ಎಸ್. ಪಾಟೀಲ್ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹರಿಹರ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-೧೦ರ ಬಸವವಾದ ಮತ್ತು ಸಂವಿಧಾನದ ಆಶಯ ಕುರಿತು ಅವರು ಮಾತನಾಡಿದರು.
ಬಸವ ವಾದ ನಮಗೆ ಅರ್ಥ ಆಗಬೇಕು. ಮೊದಲು ಸಂವಿಧಾನ ಓದಿದರೆ ಬಸವಣ್ಣ ಅರ್ಥ ಆಗುತ್ತಾರೆ. ದೇಶದಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕಿದವರ ಮನೆಯಲ್ಲೇ ಬಸವಣ್ಣನ ಜನನ ಆಗಿದೆ. ಬಸವಣ್ಣ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಕಾಯಕ ಜೀವಿಗಳಿಗೆ ಲಿಂಗ ದೀಕ್ಷೆ ನೀಡಿದರು ಎಂದರು.
ಭಾರತದ ನೆಲದಲ್ಲಿ ಅನೇಕ ಮಹನೀಯರು ಶತಮಾನಗಳಿಂದ ಮನುವಾದದ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಬುದ್ಧ-ಬಸವ, ಕಬೀರ ಪ್ರಮುಖರು. ಈ ಸಮಾಜದಲ್ಲಿ ಅನಾದಿ ಕಾಲದಿಂದಲೂ ಅಸಮಾನತೆ ತಾಂಡವವಾಡುತ್ತಲೇ ಇದೆ. ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷವಾದರೂ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಸವಣ್ಣ ೧೨ನೇ ಶತಮಾನದಲ್ಲಿಯೇ ಲಿಂಗ ಸಮಾನತೆ ಮಾಡಿದರು. ಪುರೋಹಿತಶಾಹಿಗಳು ಹಾಕಿರುವ ವ್ಯವಸ್ಥೆ ಬದಲಾಯಿಸುವುದೇ ಬಸವಣ್ಣನ ಚಳವಳಿ ಆಶಯವಾಗಿತ್ತು. ಆದರೆ ಇಂದು ಅದೇ ಪುರೋಹಿತಶಾಹಿಗಳು ಭಾರತವನ್ನು ಮರಳಿ ಶಿಲಾಯುಗಕ್ಕೆ ಕೊಂಡೊಯ್ಯುವ ಹುನ್ನಾರ ನಡೆಸಿದ್ದಾರೆ. ಅದನ್ನು ಬಸವಾದಿಗಳು, ಡಾ.ಅಂಬೇಡ್ಕರ್ ವಾದಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಬಸವಣ್ಣ ಯಾವೊಂದು ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ಈ ನಾಡಿನ ಆಸ್ತಿ. ಹಳ್ಳಿಗಳಲ್ಲಿ ದಲಿತರಷ್ಟು ಬಸವ ತತ್ವಗಳನ್ನು ಅಪ್ಪಿಕೊಂಡವರು ಯಾರೂ ಇಲ್ಲ. ಪ್ರತಿಯೊಬ್ಬ ದಲಿತ ಬಸವ ತತ್ವ ಪಾಲನೆ ಮಾಡುತ್ತಾನೆ ಎಂದರು.
ಡಾ.ಸೂರ್ಯಕಾAತ ಸುಜ್ಯಾತ್, ಡಾ.ಗವಿಸಿದ್ದಪ್ಪ ಪಾಟೀಲ್, ಸಾಹಿತಿ ಆರ್.ಕೆ. ಹುಡಗಿ, ರೇಣುಕಾ ಸಿಂಗೆ, ಪ್ರಭುಲಿಂಗ ಮಹಾಗಾಂವಕರ್ ಇದ್ದರು.