ದಾವಣಗೆರೆ: ಅತಿಥಿಗಳ ಸ್ವಾಗತಕ್ಕೆ ಬ್ಯಾಂಡ್‌ನೊಂದಿಗೆ ಸಜ್ಜಾಗಿದ್ದ ಪಿಎಸ್‌ಎಸ್‌ಆರ್ ಶಾಲಾಮಕ್ಕಳು, ಕೌಂಟರ್‌ಗಳಲ್ಲಿ ಊಟ ಬಡಿಸುತ್ತ ಬಸವಳಿದ ಕೆಲಸಗಾರರು, ಬೆಣ್ಣೆದೋಸೆ ಸ್ಟಾಲ್‌ಗಳತ್ತ ಮುಗಿಬಿದ್ದ ಜನರು, ಮೆರವಣಿಗೆಯಲ್ಲಿ ಮೋಡಿ ಮಾಡಿದ ಕಲಾವಿದರು, ಕೆಂಡದಂಥ ಬಿಸಿಲಲ್ಲೂ ವ್ಯಾಪಾರದ ಮಳೆ ಕಂಡ ವರ್ತಕರು..
ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜನೆಯಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಧಿವೇಶನದಲ್ಲಿ ಕಂಡುಬಂದ ವಿಶೇಷಗಳಿವು.
ಮಹಾಸಭಾಧ್ಯಕ್ಷರ ಮೆರವಣಿಗೆ ಮಧ್ಯಾಹ್ನ ಒಂದು ಗಂಟೆಗೆ ಸಮಾಪನೆಗೊಂಡು, ಅತಿಥಿ ಗಣ್ಯರು ವೇದಿಕೆ ಹತ್ತುವ ಹೊತ್ತಿಗೆ ಶಿವಕುಮಾರ ಸ್ವಾಮಿ ಮಹಾಮಂಟಪ ಹೌಸ್‌ಫುಲ್ ಆಗಿತ್ತು. ಕೆಲವರು ಶಾಮಿಯಾನದ ಹೊರತಾಗಿಯೂ ಬಿಸಿಲಿನಲ್ಲೂ ಕೂತು ಪ್ರಮುಖರ ಭಾಷಣ ಆಲಿಸಿದರು. ನಾಲ್ಕು ಎಲ್‌ಇಡಿ ಪರದೆಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಕಣ್ತುಂಬಿಕೊಂಡರು.
ಚಿತ್ರದುರ್ಗ, ಹಾವೇರಿ, ಮೈಸೂರು, ಶಿವಮೊಗ್ಗ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳ ಸಹಸ್ರ ಸಂಖ್ಯೆಯ ಬೆಳಗ್ಗಿನಿಂದ ಜಮಾಯಿಸುತ್ತಲೇ ಇದ್ದರು. ಗುಂಪೊಂದು ಹರ ಹರ ಮಹಾದೇವ ಎಂಬ ಸದ್ದಿನೊಂದಿಗೆ ವೇದಿಕೆಯತ್ತ ಹೆಜ್ಜೆ ಹಾಕಿತು. ಮಹಾಸಭಾದ ಮೊಹರೆಯಿದ್ದ ರಟ್ಟಿನ ಕ್ಯಾಪ್‌ಗಳು ಅನೇಕ ತಲೆಯೇರಿದ್ದವು.
ಲಿಂಗಾಯತರು ಇನ್ನಷ್ಟು ಮಂದಿ ಸೇರಬೇಕಿತ್ತು. ನಾಳೆ ಮತ್ತಷ್ಟು ಜನರು ಬರಬಹುದು. ಸಮಾಜದ ಎಲ್ಲ ಒಳಪಂಗಡಗಳ ಬಡತನದ ಆಧಾರದ ಮೇಲೆ ಮೀಸಲಾತಿ ನೀಡಿದರೆ ಉಳಿದ ಸಮಾಜಗಳಿಗೂ ಮಾದರಿಯಾಗಬಹುದು ಎಂದು ಷಹಾಪುರದ ಬಸವರಾಜಯ್ಯ ಅನಿಸಿಕೆ ಹಂಚಿಕೊಂಡರು.
ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಸರಿಯಾಗಿಲ್ಲ. ಇದನ್ನು ಸರಿಪಡಿಸುವ ಒತ್ತಡಕ್ಕಾಗಿಯೇ ಈ ಅಧಿವೇಶನ ನಡೆದಿದೆ. ಮರು ಗಣತಿ ಆಗಬೇಕಿದೆ. ಆದರೆ ಸಿದ್ದರಾಮಯ್ಯ ಇದಕ್ಕೆ ಸ್ಪಂದಿಸುತ್ತಾರಾ ಎಂಬುದು ತಿಳಿಯದು ಎಂದು ತೂಲಹಳ್ಳಿಯ ಮಂಜಪ್ಪ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದರು.
ಅಡುಗೆ ತಯಾರಿ, ಸೇವೆಗೆ 400 ಜನ
ಬೆಳಗಿನ ತಿಂಡಿಗೆ ಉಪ್ಪಿಟ್ಟು-ಕೇಸರಿಬಾತ್‌ನ ಉಪಾಹಾರ ಸಿದ್ಧವಾಗಿದ್ದರೆ, ಮಧ್ಯಾಹ್ನದ ಊಟಕ್ಕೆ ಬೂಂದಿ, ಗೋಧಿ ಹುಗ್ಗಿ, ರೊಟ್ಟಿ- ಪಲ್ಯ, ಪಲಾವ್, ಅನ್ನ-ಸಾಂಬಾರ್, ಬಜ್ಜಿ ಬಡಿಸಲಾಯಿತು. ಬೆಳಗ್ಗೆ 7ರಿಂದ ದಾಸೋಹ ಸೇವಾ ಕಾರ್ಯ ನಡೆಯಿತು.
ಜಗಳೂರಿನ ಬಾಣಸಿಗ ರಾಮಪ್ಪ ತಂಡದ ಸುಮಾರು 400 ಮಂದಿ ಸ್ವಯಂಸೇವಕರು ತಿಂಡಿ, ಊಟ ತಯಾರಿಸುವ ಜತೆಗೆ ಬಡಿಸುವಲ್ಲಿ ಬಸವಳಿಯಿತು. ಸುಮಾರು 40 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಗಣ್ಯರಿಗೆ ಬೇರೆಡೆ ವ್ಯವಸ್ಥೆ ಮಾಡಲಾಗಿತ್ತು. ಬ್ಯಾರಿಕೇಡ್ ದಾಟಿ ಜನರು ಒಳಗೆ ನುಗ್ಗುತ್ತಿದ್ದರಿಂದ ಅವರನ್ನು ನಿಯಂತ್ರಿಸಲು ಆಯೋಜಕರು ಹರಸಾಹಸ ಪಡಬೇಕಾಯಿತು.
ವಸ್ತು ಪ್ರದರ್ಶನದ ಆಕರ್ಷಣೆ:
ವೇದಿಕೆಯ ಎಡಭಾಗದಲ್ಲಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಕೃಷಿ ಯಂತ್ರೋಪಕರಣಗಳು, ನೂತನ ಬೈಕ್‌ಗಳು, ಜಿಮ್ ಉಪಕರಣಗಳು, ಮರದ ಪೀಠೋಪಕರಣಗಳು, ಗೃಹಲಂಕಾರದ ವಸ್ತುಗಳು, ಕುರುಕಲು ತಿಂಡಿ ತಿನಿಸು, ಪೇಂಟಿಂಗ್ ಕಲಾಕೃತಿಗಳು, ಸಿರಿಧಾನ್ಯದ ಆಹಾರೋತ್ಪನ್ನಗಳು, ಕೋಟುಗಳು, ಜೇಡಿಮಣ್ಣಿನ ಕಲಾಕೃತಿಗಳು, ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಕಸೂತಿ ನೇಯ್ಗೆ ಹಾಗೂ ಕೈಮಗ್ಗದ ವಸ್ತ್ರಗಳು, ಸಿದ್ಧ ಉಡುಪುಗಳು ಅಲ್ಲಿದ್ದವು.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿ, ಧಾರವಾಡ ಕೃಷಿ ವಿವಿ, ಬಾಗಲಕೋಟೆಯ ವಿವಿಗಳಿಂದ ಬಾಳೆಕಾಯಿ, ಸಿರಿಧಾನ್ಯ, ಮೆಣಸಿನಕಾಯಿ, ಅಡಕೆ ಮೊದಲಾದ ಹೊಸ ತಳಿಗಳನ್ನು ಪರಿಚಯಿಸಿದವು. ವಿವಿಧ ಪ್ರಕಾಶನದ ಪುಸ್ತಕಗಳ ಪ್ರದರ್ಶನ ಓದುಗರ ಗಮನ ಸೆಳೆಯಿತು.
ಬೆಣ್ಣೆದೋಸೆ ಘಮಲು..
ಬೆಣ್ಣೆದೋಸೆಗೆ ಅಂತಾರಾಷ್ಟ್ರೀಯ ಬ್ರಾೃಂಡಿಂಗ್ ನೀಡುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಇದೇ ವೇಳೆ ಮೈದಾನದಲ್ಲಿ ಆಯೋಜಿಸಿದ್ದ ದೋಸೆ ಉತ್ಸವದ ಘಮಲು ಎಲ್ಲರನ್ನು ಕಾಡಿತು. ನಗರದ 8 ದೋಸೆ ಮಳಿಗೆಗಳನ್ನು ಹಾಕಿದ್ದ ಹೋಟೆಲ್ ಮಾಲೀಕರು ಮೊದಲ ದಿನವೇ ಉತ್ತಮ ವ್ಯಾಪಾರದ ರುಚಿ ಕಂಡರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬೆಣ್ಣೆ ಗುಣಮಟ್ಟ ಪರಿಶೀಲಿಸುವ ಜತೆಗೆ ಬೆಣ್ಣೆದೋಸೆ ಸವಿದರು. ದೋಸೆ ಉತ್ಸವದಲ್ಲಿ ಜನರು ಭಾಗವಹಿಸುವಂತೆ ಕೋರುವ ಧ್ವಜಗಳನ್ನು ದೋಸೆ ಹೋಟೆಲ್ ಮಾಲೀಕರಿಗೆ ನೀಡಲಾಯಿತು. ಎಡಿಸಿ ಪಿ.ಎನ್.ಲೋಕೇಶ್, ಆಹಾರ ನಾಗರಿಕ ಪೂರೈಕೆ ಇಲಾಖೆ ಡಿಡಿ ಸಿದ್ದರಾಮ ಮರಿಹಾಳ್, ತೋಟಗಾರಿಕೆ ಇಲಾಖೆ ಡಿಡಿ ರಾಘವೇಂದ್ರ ಪ್ರಸಾದ್ ಇತರರಿದ್ದರು.
ಕುದುರಿದ ವ್ಯಾಪಾರ
ಚಹಾದಂಗಡಿ, ಮಂಡಕ್ಕಿ ಮಸಾಲಾ, ಉಡುಪುಗಳು, ಲೇಖನಿ ಸಾಮಗ್ರಿಗಳು, ಸಿರಿಧಾನ್ಯದ ಪೊಟ್ಟಣಗಳ ಮಾರಾಟದಿಂದ ವರ್ತಕರು ದಿನ ಕಳೆದರು. ಬಿಸಿಲಿನ ದಾಹಕ್ಕೆ ಐಸ್‌ಕ್ರೀ, ಕಬ್ಬಿನಹಾಲಿನತ್ತ ಅನೇಕರು ಮೊರೆಹೋದರು. ಊಟದ ನಂತರ ಬೀಡಾ ಅಂಗಡಿ, ಸೌತೆಕಾಯಿ, ಪಪ್ಪಾಯಿ, ಪೇರಲೆ, ಬಾಳೆ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ವ್ಯಾಪಾರಿಗಳು ಖುಷಿಪಟ್ಟರು. ಚಿಂದಿ ಹಾಯವವರು ಕುಡಿವ ನೀರಿನ ಬಾಟಲುಗಳನ್ನು ಸಂಗ್ರಹಿಸಿ ಸಂಭ್ರಮಿಸಿದರು.
ಕಲಾ ತಂಡಗಳ ಮೆರುಗು
ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಜ್ಯದ ಸುಮಾರು 20 ಕಲಾ ತಂಡಗಳು ಹೊಸ ಜಾನಪದ ಲೋಕವನ್ನೇ ಮರು ಸೃಷ್ಟಿಸಿದವು! ಗಜರಾಜನ ಜೋಡಿಯ ಗಂಭೀರ ಹೆಜ್ಜೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.
ಯಲ್ಲಾಪುರದ ಡಮಾಮಿ ನೃತ್ಯ, ಗಂಗಾವತಿಯ ಕೊಂಬುಕಹಳೆ, ಹೊಸಪೇಟೆಯ ಡೊಳ್ಳು ಕುಣಿತ, ದರೋಜಿಯ ಹಗಲುವೇಷ, ಸವಣೂರಿನ ವೀರಗಾಸೆ, ರಾಮನಗರದ ತಮಟೆ, ಪಟ ಕುಣಿತ, ಮಂಡ್ಯದ ಪೂಜಾ ಕುಣಿತ, ಸೋಮನ ಕುಣಿತ, ಸಾಗರದ ಮಹಿಳಾ ಡೊಳ್ಳು ಕುಣಿತ, ಉಡುಪಿಯ ಚಂಡೆ, ಮೂಡುಬಿದರಿಯ ಹುಲಿ ಕುಣಿತ, ಚಿತ್ರದುರ್ಗದ ಗೊರವರ ಕುಣಿತ, ಕಲಘಟಗಿಯ ಜಗ್ಗಲಿಗೆ ಮೇಳ, ಬೆಳ್ತಂಗಡಿಯ ಕೀಲುಕುದುರೆ- ಗೊಂಬೆ ಕುಣಿತ, ಹೂವಿನಹಡಗಲಿಯ ಲೇಂಗಿ ನೃತ್ಯ, ರಾಣೆಬೆನ್ನೂರಿನ ಪುರುವಂತಿಕೆ, ಧರ್ಮಸ್ಥಳದ ನವಿಲು ಕುಣಿತ ಮೊದಲಾದ ತಂಡಗಳು ಮೋಡಿ ಮಾಡಿದವು. ಸಿದ್ಧಗಂಗಾ ಶಾಲೆಯ ಮಕ್ಕಳು ಶಿವಶರಣರು, ಸ್ವಾಮೀಜಿ, ಪ್ರಮುಖರ ವೇಷದಲ್ಲಿ ಕಂಗೊಳಿಸಿದರು