ಜಿಲ್ಲೆ

ಜನಜಾಗೃತಿಗಾಗಿ ಎಎಪಿಯಿಂದ ಸಂವಾದ

ಚಿತ್ರದುರ್ಗ: ಎಲ್ಲಾ ಸೇರೋಣ ಬನ್ನಿ, ಮಾತಾಡೋಣ ಸಂವಾದದ ಮೂಲಕ ರಾಜ್ಯಾದ್ಯಂತ ಸಂಚರಿಸಿ ಜನಜಾಗೃತಿಗೆ ಮುಂದಾಗಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪ್ರಬಲ ಪಕ್ಷಗಳ ಜೊತೆ ನಮ್ಮ ಪಕ್ಷ ಪೈಪೋಟಿ ನೀಡಬೇಕಾಗಿದೆ. ಹೀಗಾಗಿ ಜನಸಾಮಾನ್ಯರ ಜೊತೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸಿ, ಉಚಿತವಾಗಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದರು.

ಯಾವುದೇ ಪಕ್ಷವಾಗಲಿ ಜನರಿಗೆ ಒಳಿತು ಮಾಡುವುದು ಮುಖ್ಯ. ಆದರೆ, ರಾಜ್ಯದಲ್ಲಿ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಯೋಜನೆಯಡಿ ಹಣ ಖಾತೆಗೆ ಜಮಾ ಆಗಿಲ್ಲ. ಹಣಕಾಸಿನ ವ್ಯವಸ್ಥೆ, ತಾಂತ್ರಿಕ ಸಮಸ್ಯೆ ಮೊದಲು ಸರಿಪಡಿಸಿಕೊಳ್ಳಬೇಕಿತ್ತು. ಗ್ಯಾರಂಟಿ ಘೋಷಿಸುವ ಮುನ್ನ ಸಾಧಕ-ಬಾಧಕಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಜಾರಿಗೊಳಿಸಬೇಕಿತ್ತು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಗೆ ಮೀಸಲಿಟ್ಟಿರುವ 34 ಸಾವಿರ ಕೋಟಿ ರೂ.ನಲ್ಲಿ ರಾಜ್ಯ ಸರ್ಕಾರ 11 ಸಾವಿರ ಕೋಟಿ ರೂ. ತೆಗೆದು ಉಚಿತ ಯೋಜನೆಗಳಿಗೆ ನೀಡಿರುವುದು ಕಣ್ಣೊರೆಸುವ ತಂತ್ರ. 14 ಅಕಾಡೆಮಿ, 4 ಅಭಿವೃದ್ಧಿ ಪ್ರಾಧಿಕಾರಗಳಿಗೆ ನಯಾ ಪೈಸೆ ದುಡ್ಡು ನೀಡಿಲ್ಲ. ನುಡಿಯದಂತೆ ನಡೆಯದಿರುವುದು, ಸುಳ್ಳು ಹೇಳುವುದೇ ಕಾಂಗ್ರೆಸ್ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಲೋಕಸಭೆ, ಜಿಪಂ, ತಾಪಂ, ಮಹಾನಗರಪಾಲಿಕೆ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು. ಅದಕ್ಕಾಗಿ ಪಕ್ಷದಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ರಾಥೋಡ್ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪಕ್ಷದ ಕಾರ್ಯಕರ್ತರಿದ್ದಾರೆ. ಸಂಘಟನೆಗೆ ಆದ್ಯತೆ ನೀಡುವ ದೃಷ್ಟಿಯಿಂದಲೂ ಸಂವಾದ ಆಯೋಜಿಸಿದ್ದು, ಎರಡನೇ ಸಂವಾದಕ್ಕೆ ತುಮಕೂರಿನಲ್ಲಿ ಚಾಲನೆ ಸಿಗಲಿದೆ ಎಂದು ಹೇಳಿದರು.

ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಲೋಕೇಶ್, ಜಂಬೂನಾಯ್ಕ ಇತರರಿದ್ದರು.