ಕುಶಾಲನಗರ: ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಕಾಳಿದೇವನ ಹೊಸೂರು ಗ್ರಾಮದ ಸರ್ವೇ ನಂ. 2/1ಎ ಯ 2.20 ಎಕರೆ ಜಾಗವನ್ನು ಸಾಮಾಜಿಕ ಅರಣ್ಯ ಇಲಾಖೆಯಿಂದ ಪಶುಪಾಲನಾ ಇಲಾಖೆಗೆ ದಾಖಲಾತಿ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬುಧವಾರ ಹುದುಗೂರು ಜನಜಾಗೃತಿ ರೈತ ಸಂಘದ ಸದಸ್ಯರು ಅರಣ್ಯ ಇಲಾಖೆ ಕಚೇರಿ ಸಂಪರ್ಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ಈ ಜಾಗದಲ್ಲಿ ಈಗಾಗಲೇ ಪಶು ಚಿಕಿತ್ಸಾಲಯ, ಹುದುಗೂರು ಹಾಲು ಉತ್ಪಾದಕರ ಸಂಘ ತನ್ನ ಸ್ವಂತ ಕಟ್ಟಡ ಹೊಂದಿದೆ ಮತ್ತು ಸಾರ್ವಜನಿಕರು ಆಟದ ಮೈದಾನ ಮಾಡಿಕೊಂಡಿರುವುದರಿಂದ ಈ ನಿವೇಶನವನ್ನು ಪಶುಪಾಲನಾ ಇಲಾಖೆ ಹೆಸರಿಗೆ ದಾಖಲಾತಿ ವರ್ಗಾವಣೆ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಾಮಾಜಿಕ ಅರಣ್ಯ ಇಲಾಖೆ 1929ರಿಂದಲೂ ಗೋ ಸದನ ಜಾಗವಾಗಿದ್ದ 2.20ರಲ್ಲಿ 75 ಸೆಂಟ್ ಜಾಗವನ್ನು ಅರಣ್ಯ ಇಲಾಖೆ ಹೆಸರಿಗೆ ಸೇರ್ಪಡೆ ಮಾಡಿರುವುದಲ್ಲದೆ, ಇದಕ್ಕೆ ಹೊಂದಿಕೊಂಡಂತೆ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ, ಸಾರ್ವಜನಿಕ ಕ್ರೀಡಾಂಗಣ ಮತ್ತು ಬ್ರಿಟಿಷ್ ಕಾಲದಿಂದಲೂ ಗೋ ಸದನ ಕಟ್ಟಡ ಇರುವುರಿಂದ ಈ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ 75 ಸೆಂಟ್ ಜಾಗವನ್ನು ಪಶುಪಾಲನಾ ಇಲಾಖೆ ಹೆಸರಿಗೆ ನೋಂದಣಿ ಮಾಡಿದರೆ ಈ ಜಾಗದಲ್ಲಿ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಅನುಕೂಲವಾಗುವುದು. ಆದ್ದರಿಂದ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುವಂತೆ ಒತ್ತಾಯಿಸಿದರು.
ನಮ್ಮ ಮನವಿಗೆ ಇದುವರೆಗೆ ಯಾವುದೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಜನ ಜಾಗೃತಿ ರೈತ ಸಂಘದ ಅಧ್ಯಕ್ಷ ಚಿಣ್ಣಪ್ಪ ತಿಳಿಸಿದರು.
ಹುದುಗೂರು, ಕಾಳಿದೇವನ ಹೊಸೂರು, ಮಾವಿನಹಳ್ಳ, ಮದಲಾಪುರ, ಯಡವನಾಡು ಗ್ರಾಮದ ಪ್ರಮುಖರು ಹಾಗೂ ಈ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹುದುಗೂರು ಉಮಾಮಹೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ.ಚಾಮಿ, ಜನ ಜಾಗೃತಿ ರೈತ ಸಂಘದ ಉಪಾಧ್ಯಕ್ಷ ಪೂನ್ನಪ್ಪ, ಕಾರ್ಯದರ್ಶಿ ರವಿ, ಸದಸ್ಯರಾದ ಪ್ರಕಾಶ್, ದೇವರಾಜ್, ಐ.ಎಸ್.ಗಣೇಶ್, ಹುದುಗೂರು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಮಲಾ, ಸುಶೀಲ ಪ್ರವೀಣ್ ಸೇರಿದಂತೆ ನಾಲ್ಕು ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಧಳಕ್ಕೆ ಆಗಮಿಸಿದ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಗಾನಶ್ರೀ, ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ, ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಗಾನಶ್ರೀ, ಅನೇಕ ವರ್ಷಗಳ ಹಿಂದೆಯೇ ಸಾಮಾಜಿಕ ಅರಣ್ಯ ಇಲಾಖೆ ಹೆಸರಿಗೆ ಖಾತೆ ಆಗಿದೆ. ಇದರ ಬದಲಾವಣೆಗೆ ಕಂದಾಯ ಇಲಾಖೆ, ಪಶುಪಾಲನಾ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅದರ ಮೂಲಕ ಪ್ರಯತ್ನಿಸಲಾಗುತ್ತದೆ ಎಂದು ತಿಳಿಸಿದರು.