ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರನ್ನು ಶ್ರೀಶೈಲ ಜಗದ್ಗುರುಗಳು ಸನ್ಮಾನಿಸಿದರು. ಕಾಶಿ ಜಗದ್ಗುರು ಡಾ.ವಿಶ್ವಾರಾಧ್ಯ ಸ್ವಾಮೀಜಿ, ನಿಡಸೋಸಿ ಜಗದ್ಗುರುಗಳು ಇತರರು ಇದ್ದಾರೆ. 
ಜಿಲ್ಲೆ

ಜನಜಾಗೃತಿ ಪಾದಯಾತ್ರೆಗೆ ಅದ್ದೂರಿ ಚಾಲನೆ

ಬೆಳಗಾವಿ: ಶ್ರೀಶೈಲ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನ ಜಗದ್ಗುರು ಪಂಡಿತಾರಾಧ್ಯ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರ ದೇವಸ್ಥಾನದಿಂದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಲೋಕಕಲ್ಯಾಣಕ್ಕಾಗಿ 560 ಕಿ.ಮೀ. ಪಾದಯಾತ್ರೆಗೆ ಸಸಿ ನೆಡುವ ಮೂಲಕ ಶನಿವಾರ ಚಾಲನೆ ನೀಡಲಾಯಿತು. ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಗ್ರಾಮಸ್ಥರು ಮನೆಗಳ ಮುಂದೆ ರಂಗೋಲಿ ಹಾಕಿ, ಪಾದಯಾತ್ರಿಕರ ಮೇಲೆ ಪುಷ್ಪವೃಷ್ಟಿಗೈದರು. ಚನ್ನಮ್ಮ ಪುತ್ಥಳಿಗೆ ಕಾಶಿ ಜಗದ್ಗುರುಗಳು, ಶ್ರೀಶೈಲ ಜದ್ಗುರುಗಳು ಮಾರ್ಲಾಪಣೆ ಮಾಡಿ ನಮನ ಸಲ್ಲಿಸಿದರು.

ಪಾದಯಾತ್ರೆ ಸಂಚರಿಸುವ ಮಾರ್ಗದಲ್ಲಿನ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಪರಿಸರ, ಧರ್ಮ, ಸಾವಯವ ಕೃಷಿ ಹಾಗೂ ಆರೋಗ್ಯ ಜಾಗೃತಿಗಾಗಿ ವಿವಿಧ ಕಾರ್ಯ ಕ್ರಮ ಸೇರಿ ಇಷ್ಟಲಿಂಗ ದೀಕ್ಷೆ ನೀಡುವ, ದುಶ್ಚಟಗಳ ಭಿಕ್ಷೆ ಬೇಡುವ ಕಾರ್ಯಕ್ರಮಗಳು ನಡೆಯಲಿವೆ. ಅ.29 ರಿಂದ 2023ರ ಜನವರಿ 15ರ ವರೆಗೆ ನಡೆಯುವ ಪಾದಯಾತ್ರೆ ಸಾಗುವ 560 ಕಿ.ಮೀ. ದಾರಿಯ ಎರಡೂ ಬದಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರದ ಅರಣ್ಯ ಇಲಾಖೆ ಲಕ್ಷ ಲಕ್ಷ ಸಸಿ ಉಚಿತವಾಗಿ ನೀಡಿವೆ. ಅಲ್ಲದೆ, ಸಸಿ ನೆಡುವುದಕ್ಕಾಗಿ ಸಸಿ, ಸಲಕರಣೆಗಳು ಹಾಗೂ ವಾಹನ ಮತ್ತು ಸಿಬ್ಬಂದಿ ಕೈ ಜೋಡಿಸಿರುವುದು ವಿಶೇಷ.

ಕರ್ನಾಟಕದಿಂದ ಶ್ರೀಶೈಲಕ್ಕೆ ಭೇಟಿ ನೀಡಿದ್ದ ಮಹಾತ್ಮರ ಮೂರ್ತಿ ನಿರ್ಮಿಸಿ ಎರಡು ದೊಡ್ಡ ಮಂಟಪಗಳಲ್ಲಿ ಇಡಲಾಗಿತ್ತು. ಡೊಳ್ಳು ವಾದ್ಯ, ಪುರವಂತರ ಖಡ್ಗ ಪ್ರದರ್ಶನ, ಆನೆ ಹಾಗೂ ಜಗದ್ಗುರು ಪಂಡಿತಾರಾಧ್ಯರು, ಸೋಲಾಪುರದ ಸಿದ್ದರಾಮೇಶ್ವರ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಅಲ್ಲಮಪ್ರಭು, ಶಿವಾಜಿ ಮಹಾರಾಜರ ಸ್ತಬ್ಧ ಚಿತ್ರಗಳು ಪಾದಯಾತ್ರೆಯುದ್ದಕ್ಕೂ ಗಮನಸೆಳೆದವು. ರಸ್ತೆಯ ಎರಡೂ ಬದಿಗೆ ಸಸಿ ನೆಡಲಾಯಿತು. ಸಿದ್ದು ಸವದಿ, ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಶೇಗುಣಿಸಿಯ ಮಹಾಂತ ದೇವರು, ಸಿಂದಗಿ ಶ್ರೀಗಳು, ಜಮಖಂಡಿ ಶ್ರೀಗಳು, ಜೈನಾಪುರ ಶ್ರೀಗಳು, ಬನಹಟ್ಟಿ ಶ್ರೀಗಳು, ಕೊಣ್ಣೂರು ಶ್ರೀಗಳು, ಬಿಂಡದಳ್ಳಿ ಶ್ರೀಗಳು, ಕ್ಯಾತನೂರ ಶ್ರೀಗಳು, ಜಿಪಂ ಮಾಜಿ ಸದಸ್ಯ ಪಿ.ಆರ್.ಪಾಲಬಾವಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ವೀರಭದ್ರೇಶ್ವರ ದೇವಸ್ಥಾನದ ಮೂಲಕ ಹಳೇ ಯಡೂರ ಮಾರ್ಗವಾಗಿ ಪಾದಯಾತ್ರೆ ಸಾಗಿತು.

ಪಾದಯಾತ್ರೆಯಲ್ಲಿ ಭಕ್ತರ ದಂಡು: ಚಿಕ್ಕೋಡಿ ಯಡೂರಿನ ವೀರಭದ್ರ ದೇವಸ್ಥಾನದಿಂದ ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಲೋಕಕಲ್ಯಾಣಕ್ಕಾಗಿ ನಡೆಯುತ್ತಿರುವ 560 ಕಿ.ಮಿ. ಪಾದಯಾತ್ರೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.