ಹಾಸನ: ಮಂಡ್ಯದ ಕೆರಗೋಡು ಗ್ರಾಮದ ಪ್ರಕರಣವನ್ನಿಟ್ಟುಕೊಂಡು ಜನಗಳ ನಡುವೆ ಗಲಭೆಯನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಾ ಬಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ದೂರಿದರು.
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಚಿಕ್ಕ ಘಟನೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ಯವರು ದೊಡ್ಡದು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಧ್ವಜಾರೋಹಣೆಗೆ ಅನುಮತಿ ಪಡೆದಿದ್ದೇ ಬೇರೆ ಆದರೆ ಧ್ವಜಾರೋಹಣೆ ಮಾಡಿದ್ದೇ ಬೇರೆ. ಷರತ್ತು ಉಲ್ಲಂಘನೆ ಮಾಡಿದ್ದರಿಂದ ಜಿಲ್ಲಾಡಳಿತ ಧ್ವಜ ಸ್ತಂಭ ತೆರವುಗೊಳಿಸಿದೆ. ಇದಕ್ಕೆ ಜೆಡಿಎಸ್ ಪಕ್ಷದವರ ಕುಮ್ಮಕ್ಕೂ ಸಹ ಇದೆ ಎಂದು ಬುಧವಾರ ಸುದ್ದಿಗೋಷ್ಠಿ ಆರೋಪಿಸಿದರು.
ಹಿಂದೆ ಕುಮಾರಸ್ವಾಮಿ ಅವರು ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮಾತಾಡಿ, ಅವರ ಸಹವಾಸ ಬೇಡ ಎಂದಿದ್ದರು. ಈಗ ತಮ್ಮ ಅಸ್ತಿತ್ವದ ಬೇಳೆ ಬೇಯಿಸಿಕೊಳ್ಳಲು ಹಾಗೂ ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ಹೀನಾಯವಾಗಿ ಸೋತ, ಹೆಚ್‌ಡಿಕೆ, ಲೋಕಸಭಾ ಚುನಾವಣೆ ಯಲ್ಲಿ ಲಾಭ ಪಡೆಯಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಅಧಿಕಾರಕ್ಕಾಗಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲಾಗುತ್ತಿದ್ದು, ಇದಕ್ಕೆಲ್ಲಾ ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಜನರು ತಕ್ಕೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಹಾಸನ ನಗರದ ರೈಲ್ವೆ ಮೇಲು ಸೇತುವೆ ಬಂದ್ ಆಗಿರುವುದರಿಂದ ಸಮಸ್ಯೆ ಆಗಿದ್ದು, ಈ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆ. ಮೇಲ್ಸೇತುವೆಯನ್ನು ಫೆಬ್ರವರಿ ಅಂತ್ಯದೊಳಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸಿ ಉದ್ಘಾಟನೆ ಮಾಡಲಿದ್ದು, ಶೀಘ್ರವೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಶಿವಲಿಂಗೇಗೌಡರ ಹಾಗೂ ಬಿ. ಶಿವರಾಂರ ನಡುವಿನ ವಾಗ್ವಾದದ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಕಾಂಗ್ರೆಸ್ ಕೆಲ ಮುಖಂಡರು ಗುಂಪುಗಾರಿಕೆ ಮಾಡಿಕೊಂಡು ಒಬ್ಬರ ವಿರುದ್ದ ಮತ್ತೊಬ್ಬರು, ಯಾರ ವಿರುದ್ದ ಯಾರೂ ವ್ಯತಿರಿಕ್ತ ಹೇಳಿಕೆ ಕೊಡುವುದು ಬೇಡ. ಕೌಂಟರ್ ಹೇಳಿಕೆ ಕೂಡ ಕೊಡಬಾರದು. ಈ ಸಂಬಂಧ ಎಲ್ಲರೊಂದಿಗೂ ಹೈಕಮಾಂಡ್ ಮಾತನಾಡಿ ಸೂಚನೆ ಕೊಟ್ಟಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ಅಶೋಕ ನಾಯಕರಹಳ್ಳಿ, ನಗರಸಭೆ ಮಾಜಿ ಸದಸ್ಯ ಅಬ್ದೂಲ್ ಖಯ್ಯುಂ, ನಾಗರಾಜ್, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.