ಗದಗ: ದೇಶದ ಜನಗಣತಿಯನ್ನು 1948ರ ಜನಗಣತಿ ಕಾಯ್ದೆಯನ್ವಯ ನಡೆಸಲಾಗುತ್ತಿದ್ದು, ಜನಗಣತಿ ಕಾರ್ಯವನ್ನು ನಿರ್ಲಕ್ಷಿಸುವ ಅಧಿಕಾರಿಗಳಿಗೆ ದಂಡ ವಿಧಿಸುವ ಅವಕಾಶ ಕಾಯ್ದೆಯಲ್ಲಿದೆ. ಆದ್ದರಿಂದ ಜನಗಣತಿಗೆ ಸಂಬಂಧಿಸಿದ ಕಾರ್ಯವನ್ನು ವಿಶೇಷ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಜಿಲ್ಲೆಯ ಜನಗಣತಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ 2021ರ ಜನಗಣತಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ರಿಜಿಸ್ಟರ್ನ ಪರಿಷ್ಕರಣೆ ಕುರಿತು ಅಧಿಕಾರಿಗಳಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2011ರ ಜನಗಣತಿ ಹೋಲಿಸಿದಲ್ಲಿ ಈ ಬಾರಿಯ ಜನಗಣತಿ ವಿಧಾನ ಸರಳೀಕರಣಗೊಳಿಸಲಾಗಿದೆ. ಇದಕ್ಕಾಗಿ ಅಭಿವೃದ್ಧಿಪಡಿಸಿದ ಆಪ್ನಲ್ಲೇ ಎಲ್ಲ ಮಾಹಿತಿ ಸಂಗ್ರಹಿಸಬೇಕಿದೆ. ಈಗಾಗಲೇ ನೇಮಕಗೊಂಡಿರುವ ಅಧಿಕಾರಿಗಳು ಹಾಗೂ ಅವರ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮೇಲ್ವಿಚಾರಕರು ಹಾಗೂ ಗಣತಿದಾರರು ಶ್ರದ್ಧೆ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿದ ಕಾರ್ಯದ ಕುರಿತು ಸರಿಯಾದ ಮಾಹಿತಿಯನ್ನು ತರಬೇತಿಯಲ್ಲಿ ಪಡೆದುಕೊಳ್ಳಬೇಕು. ಜನರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ಮತ್ತು ಜನಗಣತಿ ಪೂರ್ವಭಾವಿ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗದರ್ಶನದಲ್ಲಿ 2021ರ ಜನಗಣತಿ ಕಾರ್ಯ ಯಶಸ್ವಿಯಾಗಿ ನಡೆಸುವುದು ನಮ್ಮೆಲ್ಲರ ಮಹತ್ವದ ಗುರಿಯಾಗಿದೆ. ವೇಳಾಪಟ್ಟಿಯನ್ವಯ ಪ್ರತಿಯೊಂದು ಕಾರ್ಯವನ್ನು ಯಾವುದೇ ಗೊಂದಲ ಹಾಗೂ ನ್ಯೂನ್ಯತೆ ಇಲ್ಲದಂತೆ ನಿರ್ವಹಿಸಬೇಕು ಎಂದರು.
ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜನಗಣತಿ ನಿರ್ದೇಶನಾಲಯದ ಗದಗ ಜಿಲ್ಲಾ ನೋಡಲ್ ಅಧಿಕಾರಿ ಜಾವೇದ್ ಹುಸೇನ್, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ ಮತ್ತಿತರರು ಇದ್ದರು.
ಜನಗಣತಿ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿ ಶ್ರೀರಾಮುಲು ಅವರು ಜನಗಣತಿಯ ಅಧಿಕಾರಿ ಸಿಬ್ಬಂದಿಗೆ ಜನಗಣತಿ ಪೂರ್ವಭಾವಿ ಸಿದ್ಧತೆ ಅಗತ್ಯದ ಕ್ರಮ ಅದಕ್ಕಾಗಿ ಬಳಸಲಾಗುತ್ತಿರುವ ಆಪ್ ಕುರಿತಂತೆ ತರಬೇತಿ ನೀಡಿದರು.</