ಬಸವಕಲ್ಯಾಣ: ಹೈದರಾಬಾದ್ ಕರ್ನಾಟಕ ಇದ್ದುದ್ದನ್ನು ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದರೂ ಜನರ ಕಲ್ಯಾಣವಾಗಿಲ್ಲ. ರೈತರ ಅಭಿವೃದ್ಧಿ ಆಗಿಲ್ಲ. ಬೆಳಗಾವಿ ಅಧಿವೇಶನ ಚರ್ಚೆಗೆ ಸೀಮಿತವಾಗದೆ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿ ಎಂದು ಶಾಸಕ ಶರಣು ಸಲಗರ ಒತ್ತಾಸೆ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ಕಕ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಅವರು, ವಿಜಯನಗರದ ಶ್ರೀಮಂತಿಕೆ, ಚಾಳುಕ್ಯರ ವೈಭವದಲ್ಲಿ ಮೆರೆದಿದ್ದ ನಮ್ಮ ನಾಡು ಯಾಕೆ ಬಡವಾಯಿತು? ಅತಿ ಹೆಚ್ಚು ಬಡವರಿರುವ ರಾಜ್ಯದ ಜಿಲ್ಲೆಗಳಾವವು ಎಂದು ತುಲನೆ ಮಾಡಿ ತಲಾ ಆದಾಯ ನೋಡಿದರೆ ನಮ್ಮ ಜಿಲ್ಲೆಗಳೇ ಬರುತ್ತವೆ.ನನ್ನ ಕ್ಷೇತ್ರದ ಜನ ಸಾಕಷ್ಟು ಸಂಖ್ಯೆಯಲ್ಲಿ ಗುಳೆ ಹೋಗುತ್ತಾರೆ. ಪುಣೆ, ಮುಂಬೈನಲ್ಲಿ ಕೂಲಿ ಮಾಡುತ್ತಾರೆ. ಐಷಾರಾಮಿ ಜೀವನ ನಡೆಸುವವರಿಗೆ ಬಡವರ ಬದುಕು ಹೇಗೆ ಅರ್ಥವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷೇತ್ರದ ಬಂಜಾರಾ ತಾಂಡಾದ ಬಡ ದಂಪತಿ ೩೦ ವರ್ಷದ ಹಿಂದೆ ಬದುಕು ಕಟ್ಟಿಕೊಳ್ಳಲು ಸಣ್ಣ ಮೂವರು ಮಕ್ಕಳೊಂದಿಗೆ ಮುಂಬೈಗೆ ಹೋಗಿ ಓದಿಸಿದರು. ದೊಡ್ಡ ಮಗನಿಗೆ ಉದ್ಯೋಗ ಸಿಕ್ಕ ನಂತರ ಗುಜರಾತ್ ಪ್ರವಾಸಕ್ಕೆ ಹೋದಾಗ ನರ್ಮದಾ ನದಿ ನೀರಿಗಿಳಿದಾಗ ಮುಳುಗಿದ. ಈತನ ರಕ್ಷಿಸಲು ಹೋಗಿ ಇನ್ನೊಬ್ಬ ಮಗನೂ ಕೊಚ್ಚಿ ಹೋದ. ಈಗಿರುವ ಒಬ್ಬಳೇ ಮಗಳಿಗೆ ಉದ್ಯೋಗ ಕೊಡಿಸುವಂತೆ ಬಡ ಕುಟುಂಬ ಕೇಳುತ್ತಿದೆ. ಈ ಕುರಿತು ಸಚಿವರು, ಅಧಿಕಾರಿಗಳಿಗೆ ಸಾಕಷ್ಟು ಸಲ ಕೇಳಿಕೊಂಡರೂ ನೌಕರಿ ಕೊಡಿಸಲು ಆಗದಂಥ ಸ್ಥಿತಿ ಇದೆ ಎಂದು ಅಸಹಾಯಕತೆ ತೋಡಿಕೊಂಡರು.
ಹಸಿವೆ ಅವಮಾನ ಅನುಭವಿಸಿದವರಿಗೇ ಗೊತ್ತು. ಅದನ್ನು ನಾನು ಅನುಭವಿಸಿದ್ದೇನೆ. ಶಿಕ್ಷಣ ಕ್ಷೇತ್ರದ ವಿಷಯಕ್ಕೆ ಬಂದರೆ ನಿಮ್ಮ ಭಾಗದಲ್ಲಿ ಎಷ್ಟು ಶಾಲೆಗಳಿವೆ? ನಮ್ಮ ಕಡೆ ಎಷ್ಟಿವೆ? ಬೆಂಗಳೂರು, ಮೈಸೂರು ಹಾಗೂ ತುಮಕೂರು ಮೇಲಿರುವ ಪ್ರೀತಿ ಕಲಬುರಗಿ, ಯಾದಗಿರಿ, ರಾಯಚೂರು ಮೇಲೇಕಿಲ್ಲ? ಕಾವೇರಿಗೆ ಸಿಗುವ ಪ್ರಾಮುಖ್ಯ ಕೃಷ್ಣೆಗೇಕಿಲ್ಲ ಎಂದು ಪ್ರಶ್ನಿಸಿದರು.
ಮಳೆಯಿಂದ ಬೆಳೆ ಹಾನಿಯಾಗಿದೆ. ಹಗಲಲ್ಲಿ ವಿದ್ಯುತ್ ಇಲ್ಲದೆ ರೈತರು ತಡರಾತ್ರಿ ಹೊಲಕ್ಕೆ ಹೋಗಿ ನೀರು ಬಿಡಬೇಕಾದಂಥ ಸ್ಥಿತಿ ಇದೆ. ಅದೆಷ್ಟೋ ಜನ ಕತ್ತಲಲ್ಲಿ ಹಾವು ಕಡಿದು ಸತ್ತಿದ್ದಾರೆ. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಅಧಿವೇಶನ ಇದಾಗಬೇಕು ಎಂದು ಆಶಿಸಿದರು.
ಹುಲಸೂರು ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕು. ಬಸವಕಲ್ಯಾಣ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್ ನಿರ್ಮಿಸಲು ನೀಡಿದ್ದ ೧೦ ಕೋಟಿ ಅನುದಾನ ವಾಪಸ್ ಪಡೆದಿದ್ದು, ಮರಳಿ ಕೊಟ್ಟು ಪಾರ್ಕ್ ನಿರ್ಮಿಸಬೇಕು ಎಂದು ಆಗ್ರಹಿಸಿದ ಸಲಗರ, ಬಸವಕಲ್ಯಾಣ ಮತಕ್ಷೇತ್ರದ ೧೮ ಕೆರೆಗಳನ್ನು ತುಂಬಿಸಬೇಕು. ಕಾರಂಜಾ ಸಂತ್ರಸ್ತರಿಗೆ ನ್ಯಾಯ ಕೊಡಬೇಕು. ಹುಲಸೂರು ತಾಲೂಕಿಗೆ ೧೮ ಹಳ್ಳಿಗಳನ್ನು ಸೇರಿಸಬೇಕು ಎಂದು ಡಿಸಿಎಂಗೆ ಮನವಿ ಮಾಡಿದರು.
ಯುವಕರ ಭವಿಷ್ಯಕ್ಕೆ ಆನ್‌ಲೈನ್ ಜೂಜು ಕೊಳ್ಳಿ: ಮೊಬೈಲ್ ರಮ್ಮಿ, ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ಎಲ್ಲಕಿಂತ ದೊಡ್ಡ ಸಮಸ್ಯೆ. ಇದರಿಂದ ಸಾಕಷ್ಟು ಹುಡುಗರು ದಾರಿ ತಪ್ಪುತ್ತಿದ್ದಾರೆ. ನೇಣಿಗೆ ಶರಣಾಗುತ್ತಿದ್ದಾರೆ ಎಂದು ಶಾಸಕ ಶರಣು ಸಲಗರ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಮುಳಬಾಗಿಲು ಶಾಸಕ ನರೇಂದ್ರ ಸ್ವಾಮಿ ಅವರು ಆನ್‌ಲೈನ್ ಜೂಜು ಗ್ರಾಮೀಣ ಯುವಕರ ಬದುಕನ್ನೇ ಕತ್ತಲೆಗೆ ದೂಡುತ್ತಿದೆ. ನಿಯಂತ್ರಣಕ್ಕೆ ವಿಶೇಷ ಕಾನೂನು ತರಬೇಕು ಎಂದು ಸಲಹೆ ನೀಡಿದರು. ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ವಿವರಿಸಿದರು.