ಚನ್ನಮ್ಮನ ಕಿತ್ತೂರು: ಕಿತ್ತೂರು ಸಂಸ್ಥಾನದ ಜನಕಥನವೇ ನಿಜವಾದ ಇತಿಹಾಸ ಎಂದು ಆಂಗ್ಲ ಭಾಷಾ ಪ್ರಾಧ್ಯಾಪಕಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಪಟ್ಟಣದ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ, ಜಿಲ್ಲಾ ಮತ್ತು ತಾಲೂಕು ಕರ್ನಾಟಕ ಜಾನಪದ ಪರಿಷತ್ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಮತ್ತು ಕಿತ್ತೂರು ವಿಜಯೋತ್ಸವದ 200ನೆಯ ವರ್ಷಾಚರಣೆ ಹಾಗೂ ಡಾ.ಸಿ.ಕೆ.ನಾವಲಗಿ ಅವರ ಕಿತ್ತೂರು ಸಂಸ್ಥಾನ ಜನಕಥನದ ಅನುಸಂಧಾನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿತ್ತೂರಿನ ಇತಿಹಾಸವನ್ನು ಬ್ರಿಟಿಷರ ದಾಖಲೆಗಳಿಗಿಂತಲೂ ನಮ್ಮ ಜನಪದ, ಲಾವಣಿ, ಗೀಗೀ ಪದಗಳಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ, ಸಂಸ್ಥಾನದ ಕುರಿತಾಗಿ ಸಂಶೋಧನಕಾರ ಡಾ.ಸಿ.ಕೆ.ನಾವಲಗಿ ಅವರು ಹಲವಾರು ಹೊಸ ಸಂಗತಿಗಳನ್ನು ಹೊರಗೆಡವಿದ್ದಾರೆ ಎಂದರು. ಡಾ.ಬಸು ಬೇವಿನಗಿಡದ, ಡಾ.ಮೋಹನ ಗುಂಡ್ಲೂರ, ಡಾ.ಸಿ.ಎಂ.ಕುಂದಗೋಳ ಮಾತನಾಡಿದರು.
ಲೇಖಕ ಡಾ.ಸಿ.ಕೆ.ನಾವಲಗಿ ಮಾತನಾಡಿ, 200ನೆಯ ಕಿತ್ತೂರು ವಿಜಯೋತ್ಸವದ ವರ್ಷಾಚರಣೆಯನ್ನು ವರ್ಷದುದ್ದಕ್ಕೂ ಅರ್ಥಪೂರ್ಣವಾಗಿ ಆಚರಿಸಿ ವೀರರಿಗೆ ಗೌರವ ಸಮರ್ಪಿಸೋಣ ಎಂದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮತ್ತು ನಿಚ್ಚಣಕಿಯ ಪಂಚಾರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಎಸ್.ಬಿ.ದಳವಾಯಿ, ವಿದ್ಯಾ ಚಂಗೋಲಿ, ಶ್ರೀಶೆಲ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಬಿದರಿ, ಪ್ರಲ್ಹಾದ ಶಿಗ್ಗಾಂವಿ, ಪ್ರಭಾವತಿ ಲದ್ದ್ದಿಮಠ, ವಿವೇಕ ಕುರಗುಂದ, ಡಾ.ಜಗದೀಶ ಹಾರೂಗೊಪ್ಪ, ಈಶ್ವರ ಗಡಿಬಿಡಿ ಇತರರಿದ್ದರು.