ಚಾಮರಾಜನಗರ: ಜಾನಪದ ಮೌಖಿಕ ಮಹಾಕಾವ್ಯಗಳು ವೈದಿಕ ಸಂಸ್ಕೃತಿಗೆ ವಿರುದ್ಧವಾಗಿದ್ದು, ಜನ ಸಂಸ್ಕೃತಿಯನ್ನು ಕಟ್ಟಲು ಸಹಕಾರಿಯಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದ ಮಹಾಕಾವ್ಯಗಳು ಜನಸಂಸ್ಕೃತಿಯನ್ನು ಪ್ರತಿಪಾದಿಸುವ ಮೂಲಕ ದೇಶದ ಸಂಸ್ಕೃತಿಯಾಗಿದೆ. ಆದರೆ ದೇಶದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಹುನ್ನಾರ ನಡೆಯುತ್ತಿದೆ. ವೈದಿಕ ಸಂಸ್ಕೃತಿ ಅಥವಾ ಏಕ ಸಂಸ್ಕೃತಿಯನ್ನು ಬಿಟ್ಟು, ಬಹುಮುಖ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕಿದೆ. ಜಾನಪದ ಮಹಾಕಾವ್ಯಗಳು ಬಹುಮುಖ ಸಂಸ್ಕೃತಿಯನ್ನು ಸಾರುತ್ತಿದ್ದು, ಅದರ ಮೇಲೆ ನಾವೆಲ್ಲರೂ ನಂಬಿಕೆ ಇಡಬೇಕಿದೆ ಎಂದರು.
ಈ ಭಾಗದ ಶ್ರೀಮಂಟೇಸ್ವಾಮಿ, ಶ್ರೀಮಹದೇಶ್ವರ, ಮೈಲಾರ ಲಿಂಗ ಹಾಗೂ ಇನ್ನಿತರೆ ಮೌಖಿಕ ಮಹಾಕಾವ್ಯಗಳು ಜಾನಪದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಈ ಕಾವ್ಯಗಳಲ್ಲಿ ಬರುವ ಸಾಂಸ್ಕೃತಿಕ ನಾಯಕರನ್ನು ದೈವತ್ವದ ನಂಬಿಕೆಯಲ್ಲಿ ಕಾಣಲಾಗುತ್ತದೆ. ಈ ಮಹಾಕಾವ್ಯಗಳ ಒಳಾರ್ಥಗಳನ್ನು ತಿಳಿದುಕೊಂಡರೆ ನಮ್ಮೊಳಗಿನ ಪ್ರಜ್ಞೆ ವಿಕಾಸವಾಗಲಿದೆ. ಈ ಕಾವ್ಯ ಪರಂಪರೆಯನ್ನು ಜಗತ್ತಿನೆಲ್ಲೆಡೆ ಪಸರಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜು ನಾಟಕ ವಿಭಾಗದ ಮುಖ್ಯಸ್ಥ ಜಗದೀಶ್ ಸಿ.ಜಾಲ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹಾದೇವಸ್ವಾಮಿ, ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಹಾಗೂ ಇತರರು ಹಾಜರಿದ್ದರು.
ಶ್ರಮಿಕ ವರ್ಗದ ಕಾವ್ಯ ನಗರೀಕರಣಗೊಳ್ಳುತ್ತಿದೆ:
ಜಾನಪದ ಮಹಾಕಾವ್ಯಗಳು ಶ್ರಮಿಕ ವರ್ಗದ ಕಾವ್ಯವಾಗಿದ್ದು, ಎಲ್ಲೋ ಒಂದು ಕಡೆ ನಗರೀಕರಣಗೊಳಿಸಲಾಗುತ್ತಿದೆ ಎಂದು ರಂಗತಜ್ಞ ಶಶಿಧರ್ ಭಾರಿಘಾಟ್ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಾನಪದ ಮೌಖಿಕ ಮಹಾಕಾವ್ಯ-ರಂಗ ಪ್ರಯೋಗದಲ್ಲಿನ ಹೊಸ ಸಾಧ್ಯತೆಗಳು ವಿಚಾರದ ಕುರಿತು ಅವರು ಮಾತನಾಡಿ, ಜಾನಪದ ಎಲ್ಲಾ ಕಲೆಗಳ ಮುಖ್ಯ ಆಕಾರವಾಗಿದೆ. ಜಾನಪದ ರಂಗಭೂಮಿ ಮತ್ತು ವೃತ್ತಿರಂಗಭೂಮಿಗೂ ಜಾನಪದ ಮಹಾಕಾವ್ಯಗಳು ಪ್ರೇರಣೆಯಾಗಿದೆ. ವರ್ತಮಾನದ ಸಮಸ್ಯೆಗಳಿಗೆ ಮೌಖಿಕ ಮಹಾಕಾವ್ಯಗಳಲ್ಲಿ ಉತ್ತರ ಸಿಗುವುದರಿಂದ ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳು ನಡೆದಿದೆ. ನೂರಾರು ನಾಟಕಗಳು ಬಂದು ಹೋಗಿದ್ದರೂ, ಜಾನಪದಕ್ಕೆ ನ್ಯಾಯ ಸಲ್ಲಿಸಲಾಗಿದೆಯೇ ಎಂಬುದು ಮುಖ್ಯವಾಗಿತ್ತದೆ. ಈ ನಿಟ್ಟಿನಲ್ಲಿ ಹೊಸ ಪ್ರಯೋಗಗಳ ಮೂಲಕ ಜಾನಪದವನ್ನು ರಂಗಕ್ಕೆ ತರುವ ಪ್ರಯತ್ನಗಳು ಹೆಚ್ಚಾಗಬೇಕಿದೆ ಎಂದು ತಿಳಿಸಿದರು.
ಸಮ-ಸಮಾಜವನ್ನು ನಿರ್ಮಿಸುವುದು ಜಾನಪದ ಮೌಖಿಕ ಮಹಾಕಾವ್ಯಗಳ ಉದ್ದೇಶವಾಗಿದೆ. ದೇವರು, ಪವಾಡ ಪುರುಷರು ಹಾಗೂ ಸಮಾಜ ಸುಧಾರಕರು ಗ್ರಾಮೀಣ ಭಾಗದ ಜನಪದರಿಂದ ಮಾತ್ರ ಉಳಿದುಕೊಂಡಿದ್ದಾರೆ.
-ಡಾ.ಕೆ.ವಿ.ನಾಗರಾಜಮೂರ್ತಿ, ಅಧ್ಯಕ್ಷ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು
ಜಾನಪದ ಮೌಖಿಕ ಮಹಾಕಾವ್ಯಗಳಿಂದ ಚಾಮರಾಜನಗರ ಬಹುದೊಡ್ಡ ಶ್ರೀಮಂತ ಜಿಲ್ಲೆಯಾಗಿದೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಿಂದಲೂ ಪ್ರತಿವರ್ಷವೂ ರಂಗೋತ್ಸವವನ್ನು ಆಯೋಜನೆ ಮಾಡಲಾಗುತ್ತಿದೆ. ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯರೇ ಅಭಿನಯಿಸಿದ್ದ ಶ್ರೀಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಗಮನಸೆಳೆದಿತ್ತು.
-ಆರ್.ಎಂ.ಸ್ವಾಮಿ, ಸಂಪರ್ಕಾಧಿಕಾರಿ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ, ಚಾಮರಾಜನಗರ