ಕಲಬುರಗಿ: ಸೂರ್ಯನಗರಿ ಮತ್ತು ಗ್ರಾಮೀಣ ಭಾಗದಲ್ಲಿ ಇನ್ಪ್ಲೂಯೆಂಜಾ ಲೈಕ್ ಇಲ್ನೆಸ್ (ಐಎಲ್ಐ) ಮತ್ತು ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಪ್ರಕರಣ ಸೇರಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಗಟ್ಟಲು ಇನ್ನಷ್ಟು ಬಿಗಿ ಕ್ರಮಗಳ ಕೈಗೊಳ್ಳುವ ಕುರಿತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಶುಕ್ರವಾರ ಸಂಜೆ ಸಭೆ ನಡೆಸಿದರು.
ಜುಲೈ-9 ವರೆಗೆ 1901 ಜನರಿಗೆ ಸೋಂಕು ಪತ್ತೆಯಾಗಿದ್ದು, 30 ಜನ ನಿಧನರಾಗಿದ್ದಾರೆ. ಕಳೆದ 15 ದಿನಗಳಲ್ಲಿ ಹೆಚ್ಚಿನ ಪಾಸಿಟಿವ್ ಕೇಸ್ಗಳ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ರೋಗಿಗಳಿಗೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ, ಹಾಸಿಗೆ ಹೆಚ್ಚಳ ಸೇರಿ ಆಸ್ಪತ್ರೆಗಳ ಮೂಲ ಸೌಲಭ್ಯ ಹೆಚ್ಚಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಲಾಯಿತು.
ಡಿಸಿ ಶರತ್ ಮಾತನಾಡಿ, ಜಿಲ್ಲೆಯಲ್ಲಿ ಐಎಲ್ಐ ಹಾಗೂ ಸಾರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತಡೆಗಟ್ಟಲು ಜಿಲ್ಲಾಡತವು ಎಲ್ಲ ಮುಂಜಾಗೃತಾ ಕ್ರಮ ಕೈಗೊಂಡಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಶುಚಿತ್ವ ಕಾಪಾಡುವುದೇ ಸೋಂಕು ತಡೆಯಲು ಮದ್ದಾಗಿದೆ ಎಂದರು.
ಮನೆಯಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳು ಇದ್ದಲ್ಲಿ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ವಿಶೇಷ ಕಾಳಜಿ ವಹಿಸಬೇಕು. ಹೊರಗಡೆಯಿಂದ ಮನೆಗೆ ಹೋದ ನಂತರ ನೇರವಾಗಿ ಕಾಯಿಲೆ ಪೀಡಿತರನ್ನು ಭೇಟಿಯಾಗಬಾರದು. ಶುಚಿಯಾಗಿ ಕೈಕಾಲು ತೊಳೆದುಕೊಳ್ಳಬೇಕು ಎಂದರು.
ಅನ್ಲಾಕ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳು ನಡೆದಿರುವುದರಿಂದ ಅಂಗಡಿ- ಮುಂಗಟ್ಟುಗಳ ಮುಂದೆ ಸಾರ್ವಜನಿಕರು ಗುಂಪಾಗಿ ಸೇರಿದ್ದಲ್ಲಿ ಅಥವಾ ಸಾಮಾಜಿಕ ಅಂತರ ಕಾಪಾಡಲು ಅಂಗಡಿಯವರು ವಿಫಲವಾದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನ್ಯರಾಜ್ಯದಿಂದ ಬಂದವರು, ಸೋಂಕಿತರ ಸಂಪರ್ಕಕ್ಕೆ ಬಂದವರು 14 ದಿನಗಳ ಹೋಂ ಕ್ವಾರಂಟೈನ್ ಕಡ್ಡಾಯವಾಗಿದ್ದು, ಯಾರಾದರೂ ಉಲ್ಲಂಘಿಸಿದ್ದಲ್ಲಿ ಕೇಸ್ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು, ಸಿಇಒ ಡಾ. ಪಿ. ರಾಜಾ, ಶಿಕ್ಷಣ ಇಲಾಖೆ ಅಪರ ಆಯುಕ್ತ ನಳಿನ ಅತುಲ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಎಚ್ಒ ಡಾ. ಎಂ.ಎ. ಜಬ್ಬಾರ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಸಹಾಯಕ ಅಯುಕ್ತರಾದ ರಾಮಚಂದ್ರ ಗಡಾದೆ, ರಮೇಶ ಕೋಲಾರ ಇದ್ದರು.