ಸುಂಟಿಕೊಪ್ಪ: ಸರ್ಕಾರ ಜನವಿರೋಧಿ ಕ್ರಮಗಳನ್ನು ಅನುಸರಿಸುವ ಮೂಲಕ ಜನಸಾಮಾನ್ಯರನ್ನು ತುಳಿಯಲು ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಪಿ.ಆರ್.ಭರತ್ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಿಐಟಿಯು 17ನೇ ರಾಷ್ಟ್ರೀಯ ಸಮ್ಮೇಳನದ ಭಿತ್ತಿಪತ್ರ ಅನಾವರಣ ಹಾಗೂ ಸ್ವಾಗತ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಅತ್ಯಂತ ಕಷ್ಟದ ದಿನಗಳು ಎದುರಾಗಿವೆ. ಜತೆಗೆ ವಾರ್ಷಿಕವಾಗಿ 1.10 ಲಕ್ಷ ರೂ. ದಾಟಿದವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ದುರದೃಷ್ಟವಶಾತ್ ಕನಿಷ್ಠ ವೇತನ ಪಡೆಯುತ್ತಿರುವವರ ವಾರ್ಷಿಕ ವರಮಾನ 1.35 ಲಕ್ಷ ರೂ. ದಾಟುತ್ತಿದ್ದು, ಇವರು ಬಿಪಿಎಲ್ ಕಾರ್ಡ್‌ನಿಂದ ಹೊರಗುಳಿಯಲ್ಲಿದ್ದಾರೆ ಎಂದು ಆಂತಕ ವ್ಯಕ್ತಪಡಿಸಿದರು.
ವಿದ್ಯಾವಂತ ಯುವ ಜನಾಂಗ ಸರ್ಕಾರಿ ಕೆಲಸಗಳಿಂದ ವಂಚಿತರಾಗುತ್ತಿದ್ದಾರೆ. ಖಾಸಗಿಕರಣದತ್ತ ದೇಶ ವಾಲಿದ್ದು, ಶೇ.60ರಷ್ಟು ಸರ್ಕಾರಿ ಉದ್ಯೋಗಗಳು ಖಾಸಗಿ ಪಾಲಾಗಿವೆ. ರೈತರಿಗೆ ನೆರವಾಗುತ್ತಿದ್ದ ಸಬ್ಸಿಡಿ ಮತ್ತು ಇತರ ರಿಯಾಯಿತಿಗಳನ್ನು ರದ್ದುಗೊಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವೆಂದು ಸುಳ್ಳು ಮಾಹಿತಿ ಬಿಂಬಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಸೋಮವಾರಪೇಟೆ ಸಿಐಟಿಯು ತಾಲೂಕು ಅಧ್ಯಕ್ಷೆ ಎಸ್.ಎನ್.ಸಾವಿತ್ರಿ, ಹಿರಿಯ ಅಂಗನವಾಡಿ ಕಾರ್ಯಕರ್ತೆ ಜೆಸ್ಸಿ ಡಿಸೋಜ, ಅಕ್ಷರದಾಸೋಹ ಬಿಸಿಯೂಟ ತಯಾರಿಕೆ ಸಂಘದ ತಾಲೂಕು ಅಧ್ಯಕ್ಷೆ ಚಾಮುಂಡಿ, ಖಜಾಂಚಿ ಯಶೋದಾ ಬಸವರಾಜ್, ಅಂಗನವಾಡಿ ಸಹಾಯಕಿಯರು, ಪೌರಕಾರ್ಮಿಕರು ಇದ್ದರು.