ಜಿಲ್ಲೆ

ಜನ ಜಾನುವಾರು ರಕ್ಷಣೆ ಸರ್ಕಾರದ ಕರ್ತವ್ಯ

ಬಾಗಲಕೋಟೆ: ಜಿಲ್ಲೆಯ ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಆರ್ಭಟಿಸುತ್ತಿರುವ ಹಿನ್ನಲೆ ಸದ್ಯದ ಪರಿಸ್ಥಿತಿ ವೀಕ್ಷಸಲು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳ ತಂಡದ ಜೊತೆಗೆ ವಿವಿಧ ಸ್ಥಳಗಳಿಗೆ ಭೇಟಿ‌ ನೀಡಿದರು.

ಘಟಪ್ರಭಾ ಅಬ್ಬರದಿಂದಾಗಿ ಸದ್ಯ ಮುಳಗುವ ಹಂತಕ್ಕೆ ಬಂದಿರುವ ಮುಧೋಳ ನಗರದ ಮುಧೋಳ ಯಾದವಾಡ ರಸ್ತೆ ಸೇತುವೆ ವಿಕ್ಷೀಸಿದರು. ನದಿ ನೀರು ನುಗ್ಗಿರುವ ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ತೆರಳಿ ಅಲ್ಲಿಯ ಸ್ಥಿತಿಗತಿ ವಿಕ್ಷೀಸಿದರು. ಈಗಾಗಲೇ ಗ್ರಾಮದಲ್ಲಿ ಸ್ಥಾಪಿಸಿರಯವ ಕಾಳಜಿ ಕೇಂದ್ರ ಮತ್ತು ಅಲ್ಲಿಗೆ ಸ್ಥಳಾಂತರಿಸಿದ ಕುಟುಂಬದ ಬಗ್ಗೆ ಮಾಹಿತಿ ಪಡೆದು ಸಂತ್ರಸ್ಥರಿಗೆ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಕೃಷ್ಣಾ ನದಿ ಪ್ರವಾಹ ಪೀಡಿತ ಜಮಖಂಡಿ ತಾಲೂಕಿನ‌ ಕುಂಬಾರ ಹಳ್ಳ ಮತ್ತು ಈಗಾಗಲೇ ಜಲಾವೃತಗೊಂಡು ಉಕ್ಕಿ ಹರಿಯುತ್ತಿರುವ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ವಿಕ್ಷೀಸಿದರು‌.

ಈ ವೇಳೆ ಮುಧೋಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ತಿಮ್ಮಾಪೂರ ಪ್ರವಾಹ ಸ್ಥಿತಿ ಎದುರಿಸಲು ನಮ್ಮ ಸರ್ಕಾರ ಸಶಕ್ತವಾಗಿದೆ. ಯಾವುದೇ ಸಂದರ್ಭದಲ್ಲೂ ಜನ ಜಾನುವಾರುಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಕೂಡ ಆಗಿದೆ. ಈಗಾಗಲೇ ನಮ್ಮ ಅಧಿಕಾರಿಗಳ ತಂಡ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಹ ನಿರ್ವಹಣೆಗೆ ಹಣದ ಕೊರತೆ ಇಲ್ಲ ಎಂದರು.

ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವದರಿಂದ ಈಗಿರುವ ಮಟ್ಟಕ್ಕಿಂತ ಇನ್ನೂ ನಾಲ್ಕೈದು ಫೂಟ್ ಹೆಚ್ಚಿಗೆ ನೀರು ಏರಿಕೆಯಾಗಲಿದೆ.
ಡ್ಯಾಂ ಮ್ಯಾನೇಜಮೆಂಟ್ ಸರಿಯಾಗಿ ನಡೆದರೆ ಪ್ರವಾಹದ ಪರಿಣಾಮದಿಂದ ಹೊರಗೆ ಬರಬಹುದು. ನಮ್ಮ ಅಧಿಕಾರಿಗಳು ಈಗಾಗಲೇ ಎರಡು ಬಾರಿ ಪ್ರವಾಹ ಸಂಭವಿಸಬಹುದಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಎಲ್ಲ ಸಿದ್ದತೆಗಳನ್ನು ಮಾಡಿಕೊ‌ಂಡಿದ್ದಾರೆ. ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿರುವ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ 12 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೃಷ್ಣಾ ನದಿಯಿಂದ ಮುತ್ತೂರು. ಮೈಗೂರು ನಡುಗಡ್ಡೆಗಳಾಗಿದ್ದು ಅಲ್ಲಿಯೂ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದರು.

ಘಟಪ್ರಭಾದ ಒಡಲಿನಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಿರ್ಜಿ ಸೇರಿದಂತೆ ಕೆಲವು ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ವಿಚಾರ ನಮ್ಮ ಗಮನದಲ್ಲಿದೆ. ಹಿಂದಿನವರು ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಈಗ ನಾನು ಗ್ರಾಮ ಸ್ಥಳಾಂತರಿಸುವ ಕುರಿತು ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಅಲ್ಲಿ ಭೂಮಿಯನ್ನು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಇದು ಸಮಸ್ಯೆಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಘಟಪ್ರಭಾ ನದಿಗೆ 76 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಹಾಗೆಯೇ ಕೃಷ್ಣಾ ನದಿಗೆ ಹಿಪ್ಪರಗಿಯಿಂದ 2.28 ಲಕ್ಷ ಕ್ಯೂಸೆಕ್ ನೀರು ಹೊರಬರುತ್ತಿದೆ. ಆದರೆ ಆಲಮಟ್ಟಿಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಇದು ಇನ್ನಷ್ಟು ಹೆಚ್ಚಿದರೂ ಅಲ್ಲಿ ಪ್ರವಾಹದ ಆತಂಕ ಬರಲ್ಲ. ಒಟ್ಟಾರೇ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ತೀರದಲ್ಲಿ ಪ್ರವಾಹ ಉಂಟಾದರೂ ಸಮರ್ಥವಾಗಿ ನಿರ್ವಹಣೆ ಮಾಡಲಾಗುತ್ತದೆ. ಈ ಬಗ್ಗೆ ಯಾವುದೇ ಆತಂಕವೂ ಬೇಡ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ಬರ ನಿರ್ವಹಣೆಗೆ ಹಣದ ಸಮಸ್ಯೆಯಿಲ್ಲ. ಎಲ್ಲ ತಹಸೀಲ್ದಾರಗಳ ಖಾತೆಗೆ ತಲಾ 1 ಕೋಟಿ ರೂ. ಕೊಡಲಾಗಿದೆ. ಬೆಳೆ ಹಾನಿ, ಮನೆ ಹಾನಿ ಸರ್ವೆಗೆ ತಂಡಗಳನ್ನು ರಚಿಸಿದ್ದೇವೆ. ಅಗತ್ಯವಿರುವಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸೂಚಿಸಲಾಗಿದೆ. ಪ್ರವಾಹ ನಿರ್ವಹಣೆಗಾಗಿ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ನದಿಗಳಲ್ಲಿ ಒಳ ಹರಿವು ಮತ್ತು ಹೊರ ಹರಿವು ನೋಡಿಕೊಂಡು ಜನರನ್ನು ಸ್ಥಳಾಂತರ ಮಾಡಲಾಗುತ್ತದೆ. ಜಲಾಶಯದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.
ಇನ್ನೂ ಮಳೆಯಿಂದ ಹಾನಿಗೊಳಗಾಗುವ ಮನೆಗಳಿಗೆ ಎನ್.ಡಿ.ಆರ್.ಎಫ್. ನಿಯಮಾವಳಿಗಳ ಪ್ರಕಾರ ಪರಿಹಾರ ಕೊಡಲಾಗುವದು‌. ಹಿಂದೆ 2019 ರಲ್ಲಿ ಒಂದು ಸಲ ಮಾತ್ರ ಪೂರ್ಣವಾಗಿ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ಕೊಡಲಾಗಿತ್ತು. ಈಗ ನಿಯಮಾವಳಿ ಪ್ರಕಾರ ಏನಿದೆಯೋ ಅದರಂತೆ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಾಗುವುದು. ಇದೆಲ್ಲ ಸರ್ವೆ ನಂತರದಲ್ಲಿ ಪರಿಹಾರ ಕಾರ್ಯನಡೆಯುತ್ತದೆ ಎಂದು ಬಿದ್ದಮನೆಗಳಿಗೆ ಪರಿಹಾರ ಎಷ್ಟು ಎನ್ನುವ ಪ್ರಶ್ನೆಗೆ ಜಿಲ್ಲಾಧಿಕಾರಿ ಉತ್ತರಿಸಿದರು.

ಜಿಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.