ಮೈಸೂರು: ಜತೆಯಲ್ಲಿ ಇದ್ದುಕೊಂಡೇ ಮದ್ದು ಹಾಕುವವರು ಇದ್ದಾರೆ ಎನ್ನುವುದು ನನಗೆ ಗೊತ್ತಿದೆ. ರಾಜಕೀಯವಾಗಿ ಏನನ್ನೂ ಮಾಡಲು ಆಗದವರು ಇನ್ನೊಬ್ಬರನ್ನು ಟೀಕಿಸುವುದಲ್ಲಿಯೇ ಕಾಲ ಕಳೆಯುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ಬಾರಿ ದಸರಾ ಅಧ್ವಾನವಾಗಿತ್ತು ಎನ್ನುವ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಐತಿಹಾಸಿಕ ದಸರಾ ಮಹೋತ್ಸವಕ್ಕೆ ತನ್ನದೇ ಆದ ಮಹತ್ವವಿದೆ. ದಸರಾ ಗೌರವಕ್ಕೆ ಕುಂದುಂಟಾಗುವ ರೀತಿ ನಾನು ಎಂದೂ ನಡೆದುಕೊಂಡಿಲ್ಲ ಎಂದು ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಎಲ್ಲರ ಸಲಹೆ ಪಡೆದು ಅದ್ದೂರಿಯಾಗಿ ದಸರಾ ಆಚರಣೆ ಮಾಡಲಾಗಿದೆ. ಲಕ್ಷಾಂತರ ಮಂದಿ ದಸರಾ ವೀಕ್ಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ದಸರಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಸರಾ ನಡೆದ ಮೇಲೆ ಜತೆಯಲ್ಲಿ ಇದ್ದುಕೊಂಡೇ ಮದ್ದು ಹಾಕುವ ಕೆಲಸ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗೆ ಟೀಕೆ ಮಾಡುವ ಕೆಲವರು ರಾಜಕೀಯವಾಗಿ ಏನನ್ನೂ ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕುತ್ತಾರೆ. ಮೈಸೂರಿನಲ್ಲಿ ನನಗೆ ಹಿತಶತ್ರುಗಳು ಅಂತ ಇಲ್ಲ. ಆದರೆ ಪಕ್ಕದಲ್ಲಿ ಕುಳಿತು ಮದ್ದು ಹಾಕುವವರು ಇದ್ದಾರೆ. ಇಲ್ಲಿ ನಾನು ಯಾರ ಹೆಸರನ್ನೂ ಪ್ರಸ್ತಾಪ ಮಾಡುವುದಿಲ್ಲ. ಅಂಥವರಿಗೆ ಚಾಮುಂಡಿ ತಾಯಿ ಒಳ್ಳೆಯ ಬುದ್ಧಿ ಕೊಡಲಿ. ಅವರನ್ನೆಲ್ಲ ಎದುರಿಸುವ ಶಕ್ತಿಯನ್ನು ನನಗೆ ಕೊಡಲಿ ಎಂದು ಮಾರ್ಮಿಕವಾಗಿ ನುಡಿದರು.
ದಸರಾ ಮಹೋತ್ಸವ ಎಲ್ಲವನ್ನೂ ಮೀರಿ ಯಶಸ್ವಿಯಾಗಿದೆ. ದಸರಾ ಮುಗಿಯುವವರೆಗೂ ಇಲ್ಲಿಯೇ ಇದ್ದು, ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಮೈಸೂರಿನವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೂ ಈ ರೀತಿ ಎಲ್ಲ ಕಾರ್ಯಕ್ರಮಗಳಿಗೆ ಹೋಗಿರಲಿಲ್ಲ ಎನ್ನುವುದನ್ನು ನಾನು ಬಲ್ಲೆ ಎಂದರು.
ಉಪ ಸಮಿತಿಗಳಿಂದ ಇನ್ನೂ ಲೆಕ್ಕ ಬಂದಿಲ್ಲ. ಮುಂದಿನ ವಾರ ಎಲ್ಲರಿಂದ ಮಾಹಿತಿ ಸಂಗ್ರಹಿಸಿ ದಸರಾ ಲೆಕ್ಕ ಕೊಡುತ್ತೇನೆ. ಈ ಬಾರಿಯ ದಸರಾದ ಒಟ್ಟಾರೆ ಪ್ರಗತಿ ಮತ್ತು ಲೋಪಗಳ ಬಗ್ಗೆ ಸ್ಮರಣ ಸಂಚಿಕೆ ತರಲು ಚಿಂತನೆ ನಡೆಸಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.