ತೇರದಾಳ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾ ನಿಮಿತ್ತ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದುಕೊಂಡರು. 
ಜಿಲ್ಲೆ

ಜಾತ್ರೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ತೇರದಾಳ: ಪಟ್ಟಣದ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವ ಶ್ರಾವಣ ಮಾಸದ ಕೊನೇ ಸೋಮವಾರ ಸಂಭ್ರಮದಿಂದ ನಡೆಯಿತು.

ಜಾತ್ರೆ ನಿಮಿತ್ತ ಪ್ರಣವಜ್ಯೋತಿ ಸ್ವರೂಪ ಅಲ್ಲಮಪ್ರಭು ದೇವರಿಗೆ ವಿಶೇಷ ಪೂಜೆ, ಆರುತಿ, ನಗಾರಿ, ಧೂಪ ಸೇವೆಗಳು ಅರ್ಚಕರಿಂದ ಸಾಂಪ್ರಾದಾಯಿಕವಾಗಿ ನಡೆದವು.

ಸಂಪ್ರದಾಯದಂತೆ ನಾಡಗೌಡರ ಮನೆಯಿಂದ ಆರುತಿ, ನಂದಿಕೋಲು ಮೆರವಣಿಗೆ ಮೂಲಕ ಆಗಮಿಸಿದ ನಂತರ ಪ್ರಭುವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಗಾರಿ ಸೇವೆ ನಂತರ ಅಂದಾಜು ಮೂರುಗಂಟೆಗಳ ಕಾಲ ದೇವಸ್ಥಾನ ಪ್ರದಕ್ಷಿಣೆ ಮೂಲಕ ಅಲಂಕಾರಿಕ ಉತ್ಸವವು ಸಂಭ್ರಮದದಿಂದ ನಡೆಯಿತು. ಸಾಂಪ್ರದಾಯಿಕ ವಾದ್ಯ- ತಾಳಗಳೊಂದಿಗೆ ಮಂಗಳಾಚರಣೆ ನಿಯೋಜಿತ ಜಾಗಗಳಲ್ಲಿ ಸೇವಾ ಭಕ್ತರು ಆಚರಿಸಿದರು. ವಿಶೇಷವಾಗಿ ರಾಜಾಧಿರಾಜರ ಪೋಷಾಕುಗಳ ಉಡುಪಿನೊಂದಿಗೆ ತಾಳಮದ್ದಳೆ ಪೋಷಾಕುಗಳ ಉಡುಪಿನೊಂದಿಗೆ ತಾಳಮದ್ದಳೆದವರು, ಅರ್ಚಕರು ಭಾಗಿಯಾಗಿರುವುದು ಇತಿಹಾಸದ ವೈಭವ ಮರುಕಳಿಸುವಂತಿತ್ತು. ಇಂತಹ ಅಭೂತಪೂರ್ವ ಜಾತ್ರೆಗೆ ರಾಜ್ಯವಷ್ಟೇ ಅಲ್ಲದೆ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ನಿರಂತರ ದಾಸೋಹ: ದೇವಸ್ಥಾನದಲ್ಲಿ ಜಾತ್ರೆ ಸಂದರ್ಭ 25 ವರ್ಷಗಳಿಂದ ಯುವಕರು ದಾಸೋಹ ಕಾರ್ಯ ನಡೆಸುತ್ತ ಬಂದಿದ್ದಾರೆ. ಈ ವರ್ಷವೂ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಇಂತಹ ಸೇವೆಯಲ್ಲಿ ನೂರಾರು ಸೇವಕರು ಭಾಗಿಯಾಗಿ ಪ್ರಭುವಿನ ಸೇವೆಗೆ ಪಾತ್ರರಾದರು.

ಜಾತ್ರೆಯ ವೈಭವ: ಒಂದೆಡೆ ಅಲ್ಲಮಪ್ರಭುವಿನ ಸುಂದರ ಪೂಜೆ, ಬೆಳ್ಳಿಯಿಂದ ಹೊಳೆಯುತ್ತಿರುವ ಬಾಗಿಲು ಚೌಕಟ್ಟುಗಳು, ಕಣ್ಣು ಕೊರೆಯುವಂತೆ ಆಕರ್ಷಿಸುತ್ತಿರುವ ನೂತನ ದೇವಸ್ಥಾನವು ಭಕ್ತರಲ್ಲಿ ಅನನ್ಯ ಭಕ್ತಿಯ ಭಾವ ಮೂಡುವಂತೆ ಮಾಡಿತು.

ಪಾದಯಾತ್ರೆ: ಬಾಗಲಕೋಟೆ, ಬೆಳಗಾವಿ ಅವಳಿ ಜಿಲ್ಲೆಗಳ ನಗರ-ಗ್ರಾಮಗಳಿಂದ ನೂರಾರು ಭಕ್ತರು ಬೆಳಗ್ಗೆಯಿಂದಲೇ ಪಾದಯಾತ್ರೆಯಲ್ಲಿ ಆಗಮಿಸಿ ಧೀರ್ಘದಂಡ ನಮಸ್ಕಾರ, ಹರಕೆ ತೀರಿಸಿದರು.

ಓಂಕಾರ ಸೇವೆ: ಅಲ್ಲಮಪ್ರಭುವಿನ ನೆಲದಲ್ಲಿ ಓಂಕಾರ ಪ್ರಣವ ಮಂತ್ರದ ಅಕ್ಷರವನ್ನು ಬರೆದು ತನ್ನ ಭವಿಷ್ಯದ ಬದುಕನ್ನು ಸುಂದರವಾಗಿಸುವಂತೆ ಹರಕೆ ಹೊರುವುದು ಇಲ್ಲಿನ ವಿಶೇಷ ಪದ್ಧತಿ. ಅಂತಹ ಸೇವೆಯು ಜಾತ್ರೆ ದಿನ ದೇವಸ್ಥಾನ ಆವರಣದಲ್ಲಿ ಎಲ್ಲೆಡೆ ಕಂಡು ಬಂದಿತು.

ಗಣ್ಯರಿಂದ ದರ್ಶನ: ಕ್ಷೇತ್ರ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಸೇರಿ ಅನೇಕ ಗಣ್ಯರು ಕುಟುಂಬ ಸಮೇತ ಜಾತ್ರೆಗೆ ಆಗಮಿಸಿ, ಪ್ರಭುವಿನ ದರ್ಶನ ಪಡೆದುಕೊಂಡರು.