ಜಿಲ್ಲೆ

ಜಡ್ಡು ಹಿಡಿದಿರುವ ಸಮಾಜ ತಿದ್ದಿದ ಸರ್ವಜ್ಞ

ಹಗರಿಬೊಮ್ಮನಹಳ್ಳಿ: ಚಿಕ್ಕ ಸಮುದಾಯವಾದ ಕುಂಬಾರರು ಕಾಯಕದಲ್ಲಿ ಪರಿಣಿತಿ ಹೊಂದಿದ್ದಾರೆ. ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸಮಾಜಮುಖಿಯಾಗಬೇಕೆಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಕುಂಬಾರ ಸಮಾಜದ ತಾಲೂಕು ಘಟಕದಿಂದ ಆಯೋಜಿಸಿದ್ದ ಕುಂಬಾರ ಗುಂಡಯ್ಯ ಜನ್ಮ ಶತಮಾನೋತ್ಸವ ಹಾಗೂ ದೀಪೋತ್ಸವದಲ್ಲಿ ಭಾನುವಾರ ಮಾತನಾಡಿದರು. ಸರ್ವಜ್ಞ ಸಾಹಿತ್ಯದ ಮೂಲಕ ಜಡ್ಡು ಹಿಡಿದಿರುವ ಸಮಾಜವನ್ನು ತಿದ್ದುವಲ್ಲಿ ಯಶಸ್ವಿಯಾಗಿದ್ದರು. ಕುಂಬಾರ ಗುಂಡಯ್ಯ ಅವರು ಕಾಯಕ ನಿಷ್ಠೆ, ತತ್ವಾದರ್ಶಗಳೊಂದಿಗೆ ಪ್ರಾಮಾಣಿಕ ಬದುಕು ನಡೆಸಿದ್ದರು. ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಗುರುಭವನದವರೆಗೆ ಕವಿ ಸರ್ವಜ್ಞ ಭಾವಚಿತ್ರದ ಮೆರವಣಿಗೆ ಜರುಗಿತು. ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಕೊಟ್ಟೂರಿನ ಚಾನುಕೂಟಿ ಸಿದ್ದಲಿಂಗ ಶಿವಾಚಾರ್ಯರು, ಶ್ರೀ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ತೆಲಸಂಗ ಮಠದ ಕುಂಬಾರ ಸಮಾಜದ ಗುಂಡ ಬಸವಲಿಂಗೇಶ್ವರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೊಟ್ಟೂರು ತಹಸೀಲ್ದಾರ್ ಅಮರೇಶ, ಪ್ರಮುಖರಾದ ರೇವಣಸಿದ್ದಪ್ಪ ಮಾಲವಿ, ಕುಂಬಾರ ಮಲ್ಲಪ್ಪ, ಬ್ಯಾಸಿಗಿದೇರಿ ಜಂಬಣ್ಣ, ಪ್ರಭಣ್ಣ, ಚಿರಂಜೀವಿ ಕುಂಬಾರ, ಶಿಕ್ಷಕರಾದ ಬಸವರಾಜ್, ಹರೀಶ, ಕೊಟ್ರೇಶಪ್ಪ, ಪಾಂಡುರಂಗ, ಬಸವರಾಜ ಕುಂಬಾರ ಇತರರಿದ್ದರು.