ಜಿಲ್ಲೆ

ಜಡಿಮಳೆಗೆ ನಡುಗಿದ ಆನೇಕಲ್ ಜನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ

ವಿಜಯವಾಣಿ ಸುದ್ದಿಜಾಲ ಆನೇಕಲ್
ಅತ್ತಿಬೆಲೆ, ಸರ್ಜಾಪುರ, ಜಿಗಣಿ, ಚಂದಾಪುರ, ಹೆಬ್ಬಗೋಡಿ, ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಪ್ರಾರಂಭವಾದ ಮಳೆ ಮಂಗಳವಾರ ಇಡೀ ದಿನ ಸುರಿದಿದ್ದು ಜನ ಹೈರಾಣಾಗಿದ್ದಾರೆ. ನಿರಂತರವಾಗಿ ಮಳೆ ಸುರಿದಿದ್ದರಿಂದ ಬೆಳಗ್ಗೆ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಪರದಾಡಿದರು.
ಹೊಸೂರು-ಬೆಂಗಳೂರು ಮುಖ್ಯರಸ್ತೆಯ ಚಂದಾಪುರದ ಬಳಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಮುಗಿಯದ ಹಿನ್ನೆಲೆ ನೀರು ನಿಂತು ವಾಹನ ಸವಾರರು ಪರದಾಡಿದರು. ಹೆದ್ದಾರಿಯಲ್ಲಿ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿ ಸಾಲುಸಾಲಾಗಿ ವಾಹನಗಳು ನಿಂತಿದ್ದವು. ಸತತವಾಗಿ ಸುರಿದ ಮಳೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ, ಹೊಸರು ರೋಡ್ ಹಾಗೂ ರಾಯಸಂದ್ರ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಟ್ರಾಫಿಕ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು.

ರಾಯಸಂದ್ರ ಹಾಗೂ ಸರ್ಜಾಪುರ ಮುಖ್ಯ ರಸ್ತೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದರೂ, ಇದುವರೆಗೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಅತ್ತಿಬೆಲೆ ಮುಖ್ಯರಸ್ತೆ ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿ ಮರದ ರೆಂಬೆಗಳು ಮುರಿದು ಬಿದ್ದು, ವಾಹನ ಸವಾರರು ರಸ್ತೆಯಲ್ಲಿ ಹೋಗಲು ಸಾಧ್ಯವಾಗದೆ ತೊಂದರೆ ಎದುರಿಸಿದ್ದರು. ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಯಲ್ಲಿ ನೀರು ತುಂಬಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ ಜನ ಪರದಾಡಬೇಕಾದ ಪರಿಸ್ಥಿತಿ ಎದುರಾದರೆ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಮನೆಯಲ್ಲಿನ ನೀರನ್ನು ಹೊರಹಾಕಲು ಪರದಾಡಬೇಕಾದ ಪರಿಸ್ಥಿತಿ ಎದುರಾಯಿತು.

ಕೆಲವು ಕಡೆ ರಾಜಕಾಲುವೆ ಹಾಗೂ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೆ ತೊಂದರೆ ಎದುರಾಗಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದರು. ಹೊಸೂರು ಬೆಂಗಳೂರು ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬೊಮ್ಮಸಂದ್ರದ ಕಿತ್ತಗಾನಹಳ್ಳಿ ಬಳಿ ಹೆದ್ದಾರಿಯಲ್ಲಿ ಚರಂಡಿಯಿಂದ ನೀರು ಮೇಲಕ್ಕೆ ಉಕ್ಕಿ ಬಂದು ಹೆದ್ದಾರಿಯಲ್ಲಿ ನಿಂತಿದ್ದರಿಂದ ವಾಹನ ಸವಾರರಿಗೆ ಎಲ್ಲಿ ನೀರು ಇದೆ ಎನ್ನುವುದು ಗೊತ್ತಾಗದೆ ಸಂಚಾರ ಮಾಡಲು ಸಾಕಷ್ಟು ಕಷ್ಟಪಡುತ್ತಿದ್ದ ದೃಶ್ಯ ಕಂಡು ಬಂತು.