ಜಿಲ್ಲೆ

ಜಗಳೂರು ಬರಪೀಡಿತ ತಾಲೂಕಾಗಿ ಘೋಷಿಸಿ

ಜಗಳೂರು: ತಾಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಣೆ ಮಾಡುವುದು ಸೇರಿದಂತೆ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಹಾಗೂ ಹಸಿರು ಸೇನೆ ವತಿಯಿಂದ ರೈತರು, ಕೂಲಿಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಹಳೆ ಮಹಾತ್ಮಗಾಂಧಿ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮೂಲಕ ತಾಲೂಕು ಕಚೇರಿಗೆ ತೆರಳಿ ಉಪ ತಹಸೀಲ್ದಾರ್ ರೂಪಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿಯೇ ಅತಂತ್ಯ ಹಿಂದುಳಿದ ಹಾಗೂ ಬರಪೀಡಿತ ತಾಲೂಕು ಜಗಳೂರು. ನೂರಾರು ವರ್ಷಗಳ ಇತಿಹಾಸವನ್ನು ನೋಡಿದರೆ 70 ವರ್ಷಗಳಷ್ಟು ಬರಪೀಡಿತಕ್ಕೆ ತುತ್ತಾಗಿದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ನೀರಾವರಿ ಸೌಲಭ್ಯ, ರೈಲು ಓಡಾಟ, ವಿಮಾನ ಹಾರಟ ಸೇರಿದಂತೆ ಹಣಕಾಸಿನ ವಹಿವಾಟು ಮಾಡುವ ವ್ಯವಹಾರಗಳಿಲ್ಲ. ಈ ಭಾಗದಲ್ಲಿ ಕೃಷಿ ಚಟಿವಟಿಕೆಯನ್ನೇ ರೈತರು ಅವಲಂಬಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇದೀಗ ಮಳೆ ಕೊರತೆಯಿಂದ ಬೆಳೆ ಒಣಗುತ್ತಿರುವುದು ರೈತರಿಗೆ ಮತಷ್ಟು ನೋವುಂಟು ಮಾಡಿದೆ. ಈಗ ಮಳೆ ಬಂದರೂ ಪ್ರಯೋಜನವಿಲ್ಲ. ಹಾಗಾಗಿ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ರೈತರಿಗೆ ಅನುಕೂಲವಾಗುವ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿ.ಎಂ. ಹೊಳೆ ಮಾತನಾಡಿ, ತಾಲೂಕಿನಲ್ಲಿ ಮುಖ್ಯ ಬೆಳೆ ಮೆಕ್ಕೆಜೋಳ, ಶೇಂಗಾ, ರಾಗಿ ಹೆಚ್ಚು ಬೆಳೆಯುತ್ತಾರೆ. ಮುಂಗಾರು ಆರಂಭದಿಂದಲೂ ಕೈಕೊಟ್ಟಿದ್ದರಿಂದ ರೈತರು ತಡವಾಗಿ ಬಿತ್ತನೆ ಮಾಡಿದ್ದಾರೆ. ಇದರಿಂದ ಇಳುವರಿ ಇಲ್ಲದೆ, ಎಲ್ಲ ರೋಗ ಹರಡಿಕೊಂಡು ಹಾಳಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಸಿಗದೆ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ರೈತರಿಗೆ ಸರ್ಕಾರ ನೆರವಿಗೆ ಬರಬೇಕು. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬಂದು ಸಾಂತ್ವನ ಹೇಳುವುದು, ಪರಿಹಾರ ಕೊಡುವುದು ಬೇಡ, ಜೀವಂತವಿರುವಾಗಲೇ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಅಧ್ಯಕ್ಷ ವೀರೇಶ್ ಚಿಕ್ಕಬನ್ನಿಹಟ್ಟಿ, ರೈತರ ಸಂಘದ ಜಿಲ್ಲಾ ಕಾರ್ಯದರ್ಶಿ ಸತೀಶ್ ಗೌಡಗೊಂಡನಹಳ್ಳಿ, ಮಡ್ರಳ್ಳಿ ತಿಪ್ಪೇಸ್ವಾಮಿ, ಸಹದೇವರೆಡ್ಡಿ, ಪ್ರಹ್ಲಾದಪ್ಪ, ರಂಗಸ್ವಾಮಿ, ಚಂದ್ರಪ್ಪ, ಹನುಮಂತಪ್ಪ, ಚೌಡೇಶ್, ಸುಪುತ್ರಪ್ಪ, ಬಸವರಾಜಪ್ಪ, ಏಕಾಂತಪ್ಪ, ಚನ್ನಪ್ಪ ಸೇರಿದಂತೆ ಮತ್ತಿತರರಿದ್ದರು.