ಚಿತ್ರದುರ್ಗ: ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು ಎಂದು ಜಗಳೂರು ತಾಲೂಕು-ಚಿತ್ರದುರ್ಗ ಜಿಲ್ಲೆ ಮರು ಸೇರ್ಪಡೆ ಹೋರಾಟ ಸಮಿತಿ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಇದೇ ವಿಚಾರವಾಗಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಸಿಎಂ ಉಪಕಾರ್ಯದರ್ಶಿ ಹಾಗೂ ಕಂದಾಯ ಸಚಿವರು ಈ ಸಂಬಂಧ ಕ್ರಮವಹಿಸುವಂತೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಮತ್ತೊಮ್ಮೆ ಮುಖ್ಯಮಂತ್ರಿ ಕಾರ್ಯಾಲಯದಿಂದಲೂ ನಿರ್ದೇಶನ ನೀಡಿದ್ದರೂ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಬೇಸರಿಸಿದರು.
ಜಗಳೂರು ತಾಲೂಕಿನ ತಹಸೀಲ್ದಾರ್ ಅವರಿಗೆ ಬೇಡಿಕೆ ಪರಿಶೀಲಿಸುವಂತೆಯೂ ಆದೇಶವಿದೆ. ಆದರೂ ಕ್ರಮಕ್ಕೆ ಮುಂದಾಗಿಲ್ಲ. ಆದ್ದರಿಂದ ಚಿತ್ರದುರ್ಗ ಜಿಲ್ಲಾಡಳಿತವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಸಮಿತಿ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ, ಉಪಾಧ್ಯಕ್ಷರಾದ ನಿಬ್ಬಗೂರು ಎಂ.ಆರ್. ಪುಟ್ಟಣ್ಣ, ರಾಜಪ್ಪ, ಖಜಾಂಚಿ ಖಾದರ್‌ಸಾಬ್, ಅಶೋಕ್‌ಕುಮಾರ್, ಜೆ.ಯಾದವರೆಡ್ಡಿ ಇತರರಿದ್ದರು.