ಎಂ.ಕೆ.ಹುಬ್ಬಳ್ಳಿ: ಹೂವಿನ ವ್ಯಾಪಾರಿ ಹಾಗೂ ಹೂವು ಬೆಳೆಗಾರನ ಮಧ್ಯೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಬಿಡಿಸಲು ಹೋದವನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆಗೈದಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.
ಎಂ.ಕೆ.ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಪಂಚವಟಿ ದಾಬಾದಲ್ಲಿ ಕೃತ್ಯ ಜರುಗಿದ್ದು, ದಾಬಾ ಮಾಲೀಕ, ಬೈಲಹೊಂಗಲ ಮೂಲದ ಪ್ರಕಾಶ ಬಸವರಾಜ ನಾಗನೂರ (38) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.
ಘಟನೆ ವಿವರ: ಬೈಲಹೊಂಗಲದ ಹೂವು ಬೆಳೆಗಾರ ಮಂಜು ಶಂಕರೆಪ್ಪ ಶಿಂತ್ರಿ ಎಂಬಾತನಿಂದ ಹೂ ಖರೀದಿಸಿದ ಹೂ-ಮಾಲೆ ಮಾರಾಟಗಾರ, ಎಂ.ಕೆ.ಹುಬ್ಬಳ್ಳಿಯ ಅಜೀಜ್ ಬಡೇಘರ್ ಮಧ್ಯೆ 1,500 ರೂ.ಹಣಕಾಸಿನ ವಿಚಾರವಾಗಿ ದಾಬಾ ಬಳಿ ಬೆಳಗ್ಗೆ ವಾಗ್ವಾದ ನಡೆದಿತ್ತು. ಹೂವು ಬೆಳೆಗಾರ ತಮ್ಮೂರಿನವ ಎಂಬ ಕಾರಣಕ್ಕೆ ದಾಬಾ ಮಾಲೀಕ ಪ್ರಕಾಶ ನಾಗನೂರ ಜಗಳ ಬಿಡಿಸಿ, ಮಧ್ಯಸ್ಥಿಕೆ ವಹಿಸಿದ್ದ. ಇದರಿಂದ ಅಜೀಜ್ ಬಡೇಘರ್ ಸಿಟ್ಟಾಗಿದ್ದ ಎನ್ನಲಾಗಿದೆ.
ರಾತ್ರಿ ಸುಮಾರು 15 ಜನರ ತಂಡದೊಂದಿಗೆ ಆಗಮಿಸಿ ದಾಬಾದಲ್ಲಿಯೇ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಶಂಕ್ರಯ್ಯ ಮಾವಿನಕಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮುಂದುವರಿಸಿದ್ದಾರೆ.