ಚಿತ್ರದುರ್ಗ: ನಗರದಲ್ಲಿ ಐದು ಅಸ್ಥಿಪಂಜರಗಳು ಪತ್ತೆ ಪ್ರಕರಣ ಸಂಬಂಧ ಆ ಕುಟುಂಬಸ್ಥರ ಆತ್ಮಶಾಂತಿಗಾಗಿ ನಾಡಿಗ್ ಫ್ಯಾಮಿಲಿ ಸಂಬಂಧಿಕರಿಂದ ತಿಲ ತರ್ಪಣ ಅಂತಿಮ ಕಾರ್ಯದ ಪೂಜಾ ವಿಧಿ-ವಿಧಾನಗಳು ಭಾನುವಾರ ನಡೆದವು.
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರರೆಡ್ಡಿ ಈ ಐವರ ತಿಲ ತರ್ಪಣವನ್ನು ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಸಹೋದರ ಸಂಬಂಧಿ ತಿಮ್ಮಾರೆಡ್ಡಿ ಮನೆಯಲ್ಲಿ ಅವರೇ ಮುಂದೆ ನಿಂತು ಜೋಯಿಸರ ಮಾರ್ಗದರ್ಶನದಂತೆ ನಡೆಸಿಕೊಟ್ಟರು.
ತಿಮ್ಮಾರೆಡ್ಡಿ ಅವರು ಜಗನ್ನಾಥರೆಡ್ಡಿ ಕುಟುಂಬಸ್ಥರ ಪಿಂಡ ಪ್ರದಾನ ನೆರವೇರಿಸಿದ ನಂತರ ಸಹೋದರ ಸಂಬಂಧಿಕರೆಲ್ಲರೂ ನಾಮ ಇಡುವ ಕಾರ್ಯದಲ್ಲಿ ಭಾಗಿಯಾದರು.
ಮೃತ ಕುಟುಂಬಸ್ಥರು ನಾಡಿಗ್ ಫ್ಯಾಮಿಲಿಗೆ ಸೇರಿರುವ ಕಾರಣ ಅದೇ ವಂಶದ 25 ಕುಟುಂಬಗಳ ನೂರಕ್ಕೂ ಹೆಚ್ಚು ಸದಸ್ಯರು ಕೊನೆ ಕಾರ್ಯದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಬೆಂಗಳೂರು, ತುಮಕೂರು, ಶಿವಮೊಗ್ಗ ಸೇರಿ ಇತರೆಡೆಗಳಿಂದಲೂ ಕೆಲವರು ಪಾಲ್ಗೊಂಡಿದ್ದರು.
ದುರಂತ ಅಂತ್ಯ ಕಂಡ ಪ್ರಕರಣ ಇದಾಗಿದ್ದು, ಹಲವರಲ್ಲಿ ನೋವಿತ್ತು. ಎಂತಹ ಸಮಸ್ಯೆ ಇದ್ದರೂ ನಮ್ಮ ಬಳಿಯಾದರೂ ಹೇಳಿಕೊಳ್ಳಬಹುದಿತ್ತು ಎಂದು ತಿಮ್ಮಾರೆಡ್ಡಿ ಮನೆಯ ಮುಂಭಾಗ ಕೂತಿದ್ದವರು ಮಾತನಾಡಿಕೊಳ್ಳುತ್ತಿದ್ದರು. ಆರ್ಥಿಕವಾಗಿ ಸಬಲರಲ್ಲದ ಕುಟುಂಬ ಸದಸ್ಯರಿಂದಲೂ ಮೂರ‌್ನಾಲ್ಕು ದಶಕಗಳಿಂದಲೇ ದೂರವಿದ್ದರು ಎಂಬ ಮಾತು ಕೇಳಿಬಂದವು.
ಎಡೆಯಲ್ಲಿ ಅನ್ನ, ಪಾಯಸ, ಅಪ್ಪಳ, ಮೊಸರು, ಸಿಹಿ ತಿನಿಸುಗಳು, ಮಾಂಸಾಹಾರ ಇಡಲಾಗಿತ್ತು. ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೆ, ಮಕ್ಕಳ ಮದುವೆ ಆಗಿರುತ್ತಿತ್ತೇನೋ ಎಂಬುದಾಗಿಯೂ ಪೂಜೆಯ ನಂತರ ಕೆಲವರು ಚರ್ಚೆ ನಡೆಸಿದರು.
ವಾಸವಿದ್ದ ಸ್ವಂತ ಮನೆಯಲ್ಲೇ ಐವರ ಅಸ್ಥಿಪಂಜರಗಳು ದೊರೆತ ಕಾರಣ ಜಗನ್ನಾಥರೆಡ್ಡಿ ಕುಟುಂಬವೆಂಬ ನಂಬಿಕೆ ಆಧರಿಸಿ ಅಂತಿಮ ಕಾರ್ಯ ನಡೆಸಿದ್ದೇವೆ. ಪ್ರಕರಣ ನಿಗೂಢವಾಗಿದ್ದು, ಎಫ್‌ಎಸ್‌ಎಲ್ ವರದಿ ನಂತರ ಸತ್ಯಾಂಶ ಹೊರಬೀಳಲಿದೆ ಎನ್ನುತ್ತಾರೆ ಸಂಬಂಧಿ ಪವನ್.
ಸಹೋದರ ಸಂಬಂಧಿಯ ಇಡೀ ಕುಟುಂಬದ ಸಾವು ತುಂಬಾ ನೋವನ್ನುಂಟು ಮಾಡಿದೆ. ರಕ್ತಸಂಬಂಧಿ ಅಲ್ಲದೆ, ಜವಾಬ್ದಾರಿಯೂ ಹೌದು ಎಂಬ ಕಾರಣಕ್ಕೆ ಫ್ಯಾಮಿಲಿ ಸದಸ್ಯರೆಲ್ಲರೂ ಸೇರಿ ಪೂಜಾ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ ಸಂಬಂಧಿ ತಿಮ್ಮಾರೆಡ್ಡಿ.
ಸಂಬಂಧ ಕಡಿದುಕೊಳ್ಳುವುದು, ದೂರ ಉಳಿಯುವುದು ಸೇರಿ ಏನೇ ಆಗಿರಲಿ, ವಂಶಸ್ಥರಲ್ಲಿ ಯಾರೇ ಮೃತರಾದರೂ ಸೂತಕ ಇದ್ದೇ ಇರುತ್ತದೆ. ಅದನ್ನು ಕಳೆದುಕೊಳ್ಳಲು ಈ ಕಾರ್ಯ ಮಾಡಿದ್ದೇವೆ ಎನ್ನುತ್ತಾರೆ ಸಂಬಂಧಿ ಕೊಲ್ಲಿ ಲಕ್ಷ್ಮಿ.
ತಿಲ ತರ್ಪಣಕ್ಕೆ ಕಾರಣವೇನು?
ಆತ್ಮಹತ್ಯೆ, ಅಪಘಾತ, ಕೊಲೆ ಸೇರಿ ಇನ್ನಿತರೆ ಅಸಹಜ ಸಾವು ಪ್ರಕರಣಗಳಲ್ಲಿ ಮೃತ ವ್ಯಕ್ತಿಯ ದೇಹವನ್ನು ಬೆರಳೆಣಿಕೆಯಷ್ಟು ದಿನಗಳಲ್ಲೇ ತ್ವರಿತವಾಗಿ ಪತ್ತೆ ಹಚ್ಚಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಪೊಲೀಸರು ಒಪ್ಪಿಸುತ್ತಾರೆ. ನಂತರ ಮೃತರ ಮೂರನೇ ದಿನದ ಕಾರ್ಯದ ಬಳಿಕ 5, 9, 11 ಅಥವಾ 13ನೇ ದಿನಕ್ಕೆ ಕೈಲಾಸ ಶಿವಗಣಾರಾಧನೆ, ವೈಕುಂಠ ಸಮಾರಾಧನೆ ಕಾರ್ಯ ಮಾಡುವುದು ಸಾಮಾನ್ಯ. ಸಹಜ ಸಾವು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಈ ಪ್ರಕರಣ ನಾಲ್ಕೈದು ವರ್ಷ ಕಳೆದ ನಂತರ ಬೆಳಕಿಗೆ ಬಂದಿದ್ದರಿಂದಾಗಿ ತಿಲ ತರ್ಪಣ (ಎಳ್ಳು ನೀರು) ಬಿಡುವ ಕಾರ್ಯವಾಗಿ ಮಾಡಲಾಗಿದೆ ಎಂದು ಸಂಬಂಧಿಕರು ನೋವು ತೋಡಿಕೊಂಡರು.