ಜಿಲ್ಲೆ

ಜಗದಂಬೆ ಆರಾಧನೆ ಬನ್ನಿ ವಿನಿಮಯ

ರಮೇಶ ಮೇಳಕುಂದಾ

ಕಲಬುರಗಿ: ನವರಾತ್ರಿ, ದಸರಾ ಹಬ್ಬದ ನಿಮಿತ್ತ ನಗರ ಸೇರಿ ಜಿಲ್ಲಾದ್ಯಂತ ಭಕ್ತಿ ಶ್ರದ್ಧೆಯೊಂದಿಗೆ ಸಡಗರದಿಂದ ಶಕ್ತಿ ದೇವತೆಯನ್ನು ಆರಾಧಿಸಲಾಯಿತು. ಸೋಮವಾರ ಆಯುಧ ಪೂಜೆ ಮಾಡಿದರೆ, ಮಂಗಳವಾರ ವಿಜಯದಶಮಿ ನಿಮಿತ್ತ ಪರಸ್ಪರ ಬನ್ನಿ ವಿನಿಮಯೊಂದಿಗೆ ಶುಭ ಕೋರಲಾಯಿತು.

ಸೋಮವಾರ ಆಯುಧ ಪೂಜೆ ನಿಮಿತ್ತ ವಾಹನ, ಯಂತ್ರ, ನಿತ್ಯದ ಸಲಕರಣೆಗಳನ್ನು ಪೂಜಿಸಲಾಯಿತು. ಇನ್ನು ಹೊಸ ವಾಹನಗಳ ಖರೀದಿಯೂ ಜೋರಾಗಿತ್ತು. ಹೊಸ ವಾಹನ ಖರೀದಿಸಿದವರು ಶರಣಬಸವೇಶ್ವರ ಸೇರಿ ವಿವಿಧ ದೇವಸ್ಥಾನಗಳ ಎದುರು ಪೂಜೆ ಸಲ್ಲಿಸಿ ಶುಭ ಹೆಜ್ಜೆ ಇಟ್ಟರು.
ಮಂಗಳವಾರ ವಿಜಯದಶಮಿ ನಿಮಿತ್ತ ಮನೆಗಳಲ್ಲಿ ಘಟಸ್ಥಾಪನೆ ಎದುರು ಮುತ್ತೆದೆಯರಿಗೆ ಉಡಿ ತುಂಬಲಾಯಿತು. ಗ್ರಾಮೀಣ ಭಾಗದಲ್ಲಿ ಮೆರವಣಿಗೆ ಮೂಲಕ ಸೀಮೋಲ್ಲಂಘನ ಮಾಡಿ ಬನ್ನಿ ಮುಡಿಯಲಾಯಿತು.

ನಗರದ ಪ್ರಮುಖ ದೇವಸ್ಥಾನಗಳಾದ ಶ್ರೀ ಸಂತೋಷ ಕಾಲನಿ, ಜೇವರ್ಗಿ ಕ್ರಾಸ್ ಹತ್ತಿರದ ಸಿಂದಗಿ ಅಂಬಾಭವಾನಿ, ಅಯ್ಯರವಾಡಿ, ನ್ಯೂ ರಾಘವೇಂದ್ರ ಕಾಲನಿ, ಚನ್ನವೀರ ನಗರ, ಟ್ಯಾಂಕ್ ಬಂಡ್ ರಸ್ತೆ, ಬ್ರಹ್ಮಪುರ, ಶಹಾಬಜಾರ್, ಕ್ಷತ್ರೀಯ ಸಮಾಜದ ದೇವಸ್ಥಾನ, ದರಿಯಾಪುರ ಕೋಟನೂರದ ಮಹಾಲಕ್ಷಿ ಸೇರಿ ವಿವಿಧೆಡೆ ದೇವಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಎಲ್ಲೆಡೆ ಭಕ್ತರಿಗೆ ಪ್ರಸಾದ ದಾಸೋಹ ವಿತರಿಸಲಾಯಿತು.
ಜಗತ್ ಬಡಾವಣೆಯಲ್ಲಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ನೇತೃತ್ವದಲ್ಲಿ ಸೀಮೋಲ್ಲಂಘನ ಮಾಡಿ ಬನ್ನಿ ಮುಡಿಯಲಾಯಿತು.