ಹೊಳಲ್ಕೆರೆ: ಗಾಂಧೀಜಿ ಜಗತ್ತಿನ ಮಹಾನ್ ಚೇತನವಾಗಿದ್ದು, ಅವರ ಅಹಿಂಸಾ ನೀತಿ, ಲಾಲ್ ಬಹಾದೂರ್ ಶಾಸ್ತ್ರಿ ಅವರ ಪ್ರಾಮಾಣಿಕತೆ ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ವಿವಿ ಸಂಚಾಲಕಿ ಸುಮಿತ್ರಾ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಗಾಂಧೀಜಿ, ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸಾಗಿಸಲು ನಾವೆಲ್ಲರೂ ಮಹನೀಯರ ಹಾದಿಯಲ್ಲಿ ಸಾಗಬೇಕಾಗಿದೆ ಎಂದರು.
ವಕೀಲ ಎಸ್.ವೇದಮೂರ್ತಿ ಮಾತನಾಡಿ, ಮಹಾತ್ಮ ಗಾಂಧೀಜಿ ವಿಶ್ವ ನಾಯಕ, ಜಗತ್ತಿನ ಎಲ್ಲೆಡೆ ಅವರ ಶಾಂತಿಮಂತ್ರ ಬಹುದೊಡ್ಡ ಪರಿಣಾಮ ಬೀರಿದೆ ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ದೇಶ, ದಲಿತರ ಉದ್ಧಾರಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡ ಸಂತ ಮಹಾತ್ಮ ಗಾಂಧೀಜಿ. ಶಾಂತಿಮಂತ್ರದ ಮೂಲಕ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಅವರ ನಡೆ ವಿಶ್ವಕ್ಕೆ ಮಾದರಿ ಆಗಿದೆ ಎಂದರು.
ಸಂಘದ ಸದಸ್ಯರಾದ ನಿಶಾಮನ್ ಹರ್, ಪತ್ರಿಕಾ ವಿತರಕರ ಸಂಘದ ತಾಲೂಕಾಧ್ಯಕ್ಷ ನಾಗರಾಜ್, ಹಿರಿಯ ಪತ್ರಕರ್ತ ಹಸನ್‌ಸಾಬ್, ಪತ್ರಕರ್ತರಾದ ಅನಂತ, ಜಯಪ್ರಕಾಶ್, ಸುರೇಶ್, ನಿರಂಜನ್, ಲೋಹಿತ್ ಆಚಾರ್, ಶಶಾಂಕ್ ಉಪಸ್ಥಿತರಿದ್ದರು.
ಬಿಜೆಪಿ ಕಚೇರಿ: ಶಾಸಕ ಎಂ.ಚಂದ್ರಪ್ಪ ಮಹನೀಯರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು. ವಿವಿಧ ಘಟಕದ ಪದಾಧಿಕಾರಿಗಳು, ಸದಸ್ಯರು, ಮುಖಂಡರು ಇದ್ದರು.