ಜಿಲ್ಲೆ

ಜಗತ್ತಿನ ದೊಡ್ಡ ಸಂಘಟನೆ ಎಬಿವಿಪಿ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಾಷ್ಟ್ರ ಮರುನಿರ್ಮಾಣ ಎಂಬ ತತ್ವದೊಂದಿಗೆ ಜನ್ಮ ತಾಳಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು ಪರಿಷತ್ ನಗರ ಘಟಕ ಅಧ್ಯಕ್ಷ ಅನೀಲ ಜಾಧವ್ ಹೇಳಿದರು.
ನಗರದಲ್ಲಿ ಏರ್ಪಡಿಸಿದ್ದ ಎಬಿವಿಪಿ 76ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, 1949ರ ಜು.9ರಂದು ಅಸ್ತಿತ್ವಕ್ಕೆ ಬಂದಿರುವ ಸಂಘಟನೆ ಏಳೂವರೆ ದಶಕದಿಂದ ದೇಶದ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಧ್ವನಿಯಾಗಿ ನಿಂತು ಕೆಲಸ ಮಾಡುತ್ತಿದೆ ಎಂದರು.
ವ್ಯಕ್ತಿ ಮೂಲಕ ರಾಷ್ಟ್ರ ನಿರ್ಮಾಣ ಮಾಡುವಂಥ ಕಾರ್ಯವನ್ನು ಪರಿಷತ್ ಮಾಡುತ್ತಿದೆ. ಶೈಕ್ಷಣಿಕ ಕ್ಷೇತ್ರದ ಜತೆಗೆ ಸಾಮಾಜಿಕವಾಗಿಯೂ ಸೇವೆ ಸಲ್ಲಿಸುತ್ತಿದೆ. ನೆರೆ ಸಂತ್ರಸ್ತರಿಗೆ ಸಹಾಯ ಮಾಡಿದೆ. ಕರೊನಾ ವೇಳೆ ಉಚಿತ ಆಹಾರ ವಿತರಣೆ ಸೇರಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಎಬಿವಿಪಿ ಹಿರಿಯ ಕಾರ್ಯಕರ್ತ ವೀರೇಶ ಸ್ವಾಮಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿನ ಅನ್ಯಾಯ, ಅದಕ್ಷತೆ ವಿರುದ್ಧ ಹೋರಾಡುವ ಜತೆಗೆ ಅನೇಕ ರಚನಾತ್ಮಕ ಕಾರ್ಯಗಳನ್ನು ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದರು.
ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ, ನಗರ ಘಟಕ ಉಪಾಧ್ಯಕ್ಷ ಅಮಿತ್ರಡ್ಡಿ ಮಾತನಾಡಿದರು. ನಗರ ಕಾರ್ಯದರ್ಶಿ ಆನಂದ, ಸಹ ಕಾರ್ಯದರ್ಶಿ ಪವನ್ ಕುಂಬಾರ, ನಾಗರಾಜ ಸುಲ್ತಾನಪುರ, ಪವನ್ ಪಾಂಚಾಳ, ಸಾಯಿ ಬೋಸ್ಲೆ, ಮಮತಾ, ಯಲ್ಲಾಲಿಂಗ ವಿಶ್ವಾಸ, ಅಂಬರೀಶ್ ಬಿರಾದಾರ್, ಲಕ್ಷ್ಮೀಕಾಂತ ಇತರರಿದ್ದರು. ಕಾರ್ಯಕ್ರಮ ನಿಮಿತ್ತ ನಗರದ ವಿವಿಧೆಡೆ ಸಸಿ ನೆಡಲಾಯಿತು.