ಜಿಲ್ಲೆ

ಜಗತ್ತಿಗೆ ಭಾವೈಕ್ಯತೆ ಸಾರಿದ ದೊಡ್ಡಘಟ್ಟ

ಎಂ.ಯೋಗೀಶ ಮೇಟಿಕುರ್ಕೆ ಹೊಸದುರ್ಗ
ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಆದರೂ ಇಲ್ಲಿ ವಿವಿಧ ಸಮುದಾಯದ ಜನರು ಒಟ್ಟುಗೂಡಿ ಹತ್ತು ದಿನ ವಿಜೃಂಭಣೆಯಿಂದ ಮೊಹರಂ ಆಚರಿಸುತ್ತಾರೆ. ಪುಟ್ಟ ಗ್ರಾಮ ಜಗತ್ತಿಗೆ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಪರಿಮಳ ಹರಡಿದೆ.
ಇಲ್ಲಿನ ಮೊಹರಂ ಆಚರಣೆಗೆ ಸುಮಾರು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಆರ್ಯ ಈಡಿಗ ಸಮುದಾಯದ ಕುಟುಂಬವೊಂದು ತಲ ತಲಾಂತರದಿಂದ ಮೊಹರಂ ಆಚರಿಸಿಕೊಂಡು ಬಂದಿದೆ. ಹಬ್ಬದ ಆಚರಣೆಗಾಗಿಯೇ ಗ್ರಾಮದಲ್ಲಿ ಪ್ರಾರ್ಥನೆ ಮಂದಿರವೊಂದನ್ನು ನಿರ್ಮಿಸಲಾಗಿದೆ.
ಪ್ರತಿವರ್ಷ ಹತ್ತು ದಿನಗಳ ಕಾಲ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗುತ್ತಿದೆ. ಹಬ್ಬ ಅರಂಭವಾದ ಮೂರನೇ ದಿನ ಪ್ರಾರ್ಥನಾ ಮಂದಿರದಲ್ಲಿ ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಏಳನೇ ದಿನ ಮತ್ತು ಒಂಬತ್ತನೇ ದಿನ ಕೆಂಡ ಆಚರಿಸಿ ಮೆರವಣಿಗೆ ಮಾಡಿ ಜಲದಿ ಮಾಡುವ ಮೂಲಕ ಹಬ್ಬ ಕೊನೆಗೊಳುತ್ತದೆ.
ಜು.20ರಂದು ಮೊಹರಂ ಆಚರಣೆ ಅರಂಭವಾಗಿದ್ದು, ಗುರುವಾರ ಏಳನೇ ದಿನದ ಕೆಂಡ ನೆರವೇರಿದೆ. ಜು.29 ರಂದು ಮೆರವಣಿಗೆಯೊಂದಿಗೆ ಪೀರಲ ದೇವರ ಮೂರ್ತಿಗಳ ಜಲದಿ ಕಾರ್ಯಕ್ರಮ ನಡೆಸುವ ಮೂಲಕ ಹಬ್ಬ ಸಮಾರೋಪಗೊಳ್ಳಲಿದೆ.
ಆರ್ಯ ಈಡಿಗ ಸಮುದಾಯದ ಪಾಂಡುರಂಗಪ್ಪ ಪ್ರಸ್ತುತ ಮೊಹರಂನ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ. ಅವರ ಮುತ್ತಜ್ಜ ಮುಸಲಪ್ಪ, ಅಜ್ಜ ಭೀಮಪ್ಪ, ತಂದೆ ಡಿ.ಹೊನ್ನಪ್ಪ ನಂತರ ನಾಲ್ಕನೇ ತಲಮಾರಿನ ಪಾಂಡುರಂಗಪ್ಪ ಆಚರಣೆಯ ಮುಂದಾಳತ್ವ ವಹಿಸಿದ್ದಾರೆ. ಗ್ರಾಮಸ್ಥರು ಹಬ್ಬ ಅಚರಣೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ.
ಸದ್ಯ ಶಿವಮೊಗ್ಗದಲ್ಲಿ ವಾಸವಾಗಿರುವ ಪಾಂಡುರಂಗಪ್ಪ ಹಬ್ಬದ ಸಮಯದಲ್ಲಿ ಊರಿಗೆ ಬಂದು ದೇವರ ಕಾರ್ಯ ನೆರವೇರಿಸುತ್ತಾರೆ. ಪಕ್ಕದ ಜಾನಕಲ್ಲು ಗ್ರಾಮದಿಂದ ಬರುವ ಮುಸ್ಲಿಂ ಸಮುದಾಯದ ಮುಜಾವರ್ ಗೌಸ್ ಸಾಬ್ ಅವರು ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬಕ್ಕೆ ಚಾಲನೆ ನೀಡಿ ಹಬ್ಬದ ವಿಧಿ ವಿಧಾನ ಪೂರೈಸುತ್ತಾರೆ.
ಸಕ್ಕರೆ ಹೊದಿಸುವ ಪದ್ಧತಿ:
ಮೊಹರಂ ಆಚರಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ಸಮುದಾಯದ ಜನರು ಕೂಡ ಮಸೀದಿಗೆ ಭೇಟಿ ನೀಡಿ ಪೀರಲ ದೇವರ ಮೂರ್ತಿಗಳಿಗೆ ಸಕ್ಕರೆ ನೈವೇದ್ಯ ಮಾಡಿ ಸಕ್ಕರೆ ಹೊದಿಸುವ ಮೂಲಕ ಹರಕೆ ತೀರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಕುಟುಂಬಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ ಸಕ್ಕರೆಯನ್ನು ಪ್ರಸಾದದ ರೂಪದಲ್ಲಿ ಜನರಿಗೆ ಹಂಚಲಾಗುತ್ತದೆ.

ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಕೂಡ ವಾಸವಾಗಿಲ್ಲ. ನಮ್ಮ ಮನೆತನದವರು ಪೂರ್ವದಿಂದಲ್ಲೂ ಗ್ರಾಮದಲ್ಲಿ ಮೊಹರಂ ಪೀರಲ ದೇವರ ಹಬ್ಬವನ್ನು ಅಚರಿಸುತ್ತಿದ್ದಾರೆ. ನಮ್ಮ ಮುತ್ತಾತ ಮುಸಲಪ್ಪ ಅವರಿಂದ ಇಲ್ಲಿಯವರೆಗೆ ಅಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಗ್ರಾಮದ ಎಲ್ಲ ಸಮುದಾಯದ ಜನರ ಸಹಕಾರದಿಂದ ವಿಜೃಂಭಣೆಯಿಂದ ಹಬ್ಬ ಅಚರಿಸಲಾಗುತ್ತಿದೆ.

ಪಾಂಡುರಂಗಪ್ಪ ದೊಡ್ಡಘಟ್ಟ

ದೊಡ್ಡಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಮೊಹರಂ ಆಚರಣೆಗೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಮುಸ್ಲಿಂ ಕುಟುಂಬಗಳಿಲ್ಲದ ಕಾರಣ ನಾವು ಹಬ್ಬದ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಎಲ್ಲ ಸಮುದಾಯದ ಜನರು ಸೇರಿ ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾರೆ.
ಮುಜಾವರ್ ಗೌಸ್‌ಸಾಬ್,ಜಾನಕಲ್ಲು ಗ್ರಾಮ